Elephant Arjuna Death: ದಸರಾ ಅಂಬಾರಿ ಹೊತ್ತು ಮೆರೆದಿದ್ದ ಅರ್ಜುನ ಕಣ್ಣೇದುರೇ ಸಾವು: ಮಾವುತ ಆಸ್ಪತ್ರೆಗೆ ದಾಖಲು
ಹಾಸನ, ಡಿಸೆಂಬರ್ 04: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು (ಡಿಸೆಂಬರ್ 04) ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಬಳಿ ನಡೆದ ಕಾರ್ಯಾಚರಣೆ ವೇಳೆ ಒಂಟಿಸಲಗ ನಡೆಸಿದ ದಾಳಿಯಿಂದ ಅರ್ಜುನ ಆನೆ ಕೊನೆಯುಸಿರೆಳೆದಿದೆ.
ಅರ್ಜುನನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮಾವುತ ವಿನೋದ್ ಕಂಗಾಲಾಗಿ ಗೋಳಾಡಿದ್ದಾರೆ. ಸಾವಿನ ಆಘಾತದಿಂದ ಮಾವುತ ವಿನೋದ್ ಕಾಡಿನಲ್ಲೇ ಅಸ್ವಸ್ಥರಾಗಿದ್ದು, ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಚಿಕಿತ್ಸೆಗೆ ರವಾನಿಸಲಾಗಿದೆ. ಅರ್ಜುನನ್ನು ಕಳೆದುಕೊಂಡ ಮಾವುತರ ದಂಡ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅರ್ಜುನನ ಮೃತದೇಹವನ್ನು ತಬ್ಬಿಕೊಂಡು ಅಳುತ್ತಿರುವ ಮಾವುತರ ಆಕ್ರಂದನ ಮುಗಿಲು ಮುಟ್ಟಿದೆ.

ಮಗುವಿನಂತೆ ಜೊತೆಗಿದ್ದ ಅರ್ಜುನನ್ನು ಕಳೆದುಕೊಂಡ ಮಾವುತರು ಕಣ್ಣೀರು ಹಾಕುತ್ತಿದ್ದು, ಮಾವುತರ ಗೋಳಾಟ ಕಂಡು ಸ್ಥಳದಲ್ಲಿದ್ದವರು ನೀರವ ಮೌನಕ್ಕೆ ಜಾರಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾರ್ಯದ ಸಿದ್ಧತೆ ಆರಂಭಿಸಿದ್ದಾರೆ.
ಅರ್ಜುನನ ಸಾವಿನ ಬಗ್ಗೆ ಡಿಎಫ್‌ಓ ಹೇಳಿದ್ದೇನು..?
ದಸರಾ ಆನೆ ಅರ್ಜುನನ ಸಾವಿನ ಬಗ್ಗೆ ಡಿಎಫ್‌ಓ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಸಳೂರು ವಲಯದಲ್ಲಿ ನಡೆಯುತ್ತಿತ್ತು. ನಡುತೋಪಿನಲ್ಲಿ ಬೆಳಗ್ಗೆಯಿಂದಲೇ ಕಾಡಾನೆಗಳನ್ನು ಗುರುತಿಸಿ ಅದನ್ನು ನಿಗಾವಹಿಸಲಾಗುತ್ತಿತ್ತು. ಕಾಡಾನೆಗಳು ಇರುವ ಸ್ಥಳಕ್ಕೆ ಹೋದಾಗ 12 ಆನೆಗಳು ಇದ್ದವು.
ಗುಂಪನ್ನು ಗಂಡಾನೆಯೊಂದು ಲೀಡ್ ಮಾಡುತ್ತಿತ್ತು. ನಮ್ಮ ಸಾಕಾನೆಗಳು ಹೋದಾಗ ಚಾರ್ಜ್ ಮಾಡೋದಕ್ಕೆ ಬಂತು. ಡಾಕ್ಟರ್ ಗಂಡಾನೆ ಮತ್ತಿನಲ್ಲಿರುವುದನ್ನು ಗಮನಿಸಿದ್ದಾರೆ. ನಮ್ಮ ಅರ್ಜುನ ಆನೆ ಅದರ ಜೊತೆ ಕಾದಾಟಕ್ಕಿಳಿದಿದೆ. ಉಳಿದ ಆನೆಗಳೆಲ್ಲಾ ವಾಪಸ್ ಆದವು. ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿತು.

ದಾಳಿ ಮಾಡಿದ ಕೂಡಲೇ ನಮ್ಮ ಸಿಬ್ಬಂದಿ ಸಾಕಾನೆಗಳು ವಾಪಸ್ ಬಂದವು. ಅರ್ಜುನನ ಮೇಲಿದ್ದ ಡಾಕ್ಟರ್ ಹಾಗೂ ಮಾವುತ ಕೂಡಾ ಇಳಿದು ಬಂದರು. ಕಾಡಾನೆ ಸ್ವಲ್ಪ ಬಲಿಷ್ಟವಾಗಿತ್ತು, ಅಲ್ಲದೇ ಕೋರೆಗಳು ಚೂಪಾಗಿದ್ದವು. ಕಾದಾಟದಲ್ಲಿ ಅರ್ಜುನ ಸಾವನ್ನಪ್ಪಿದೆ ಎಂದು ತಿಳಿಸಿದರು.
ಅರ್ಜುನ ದಸರಾ ಅಂಬಾರಿ ಹೊರುವುದರಲ್ಲಿ ಭಾಗಿಯಾಗಿತ್ತು. ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮುಂದಿನ ಕ್ರಮದ ಬಗ್ಗೆಯೂ ಸೂಚನೆ ಬಂದ ತಕ್ಷಣ ನಿರ್ವಹಿಸುತ್ತೇವೆ. ಮೃತಪಟ್ಟ ಭಾಗದಲ್ಲಿ ಅರ್ಜುನನ ಬಳಿಗೆ ನಾವು ಹೋಗುವುದಕ್ಕೆ ಆಗುತ್ತಿಲ್ಲ. ಅದರ ಸುತ್ತಮುತ್ತಲಲ್ಲೇ ಕಾಡಾನೆಗಳ ಓಡಾಡುತ್ತಿದೆ ಎಂದು ಹೇಳಿದರು.
ಅರ್ಜುನನ ದುರಂತ ಅಂತ್ಯ ಹೇಗಾಯ್ತು..?
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳಕ್ಕೆ ಬ್ರೇಕ್ ಹಾಕಲು ನವೆಂಬರ್ 24ರಿಂದ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಂದು ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಹಿಡಿದು, ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಸಮಯದಲ್ಲಿ ಕಾಡಾನೆ ದಾಳಿ ಆರಂಭಿಸಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಆದರೆ ಅರ್ಜುನ ಹೋರಾಕ್ಕಿಳಿದಿದೆ. ಎರಡು ಆನೆಗಳು ಕಾದಾಟ ಆರಂಭಿಸುತ್ತಿದ್ದಂತೆಯೇ ಅರ್ಜುನನ ಮಾವುತರು ಮೇಲಿನಿಂದ ಇಳಿದು ಓಡಿದ್ದಾರೆ. ಕೊನೆಯಲ್ಲಿ ಕಾಡಾನೆ ಅರ್ಜುನ ಹೊಟ್ಟೆಯ ಭಾಗಕ್ಕೆ ತಿವಿದಿದೆ. ಆನೆಗಳಲ್ಲಿ ಕಾದಾಟದಲ್ಲಿ ಅರ್ಜುನ ಸಾವನ್ನಪ್ಪಿದೆ.












Click it and Unblock the Notifications