ಸಚಿವ ರೇವಣ್ಣ ಅವರ ಹಾಡಿ ಹೊಗಳಿದ ಜಯಮಾಲಾ, ಎ.ಮಂಜು ಕಿಡಿ
ಹಾಸನ, ನವೆಂಬರ್ 05: ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡ್ತಾರೆ, ಸೂಪರ್ ಸಿಎಂ ರೀತಿ ನಡನೆದುಕೊಳ್ಳುತ್ತಾರೆ ಎಂದೆಲ್ಲಾ ಕಾಂಗ್ರೆಸ್ ಸಚಿವರು ಅಸಮಾಧಾನ ಹೊಂದಿದ್ದ ಎಚ್‌ಡಿ.ರೇವಣ್ಣ ಅವರನ್ನು ಇಂದು ಅದೇ ಕಾಂಗ್ರೆಸ್‌ನ ಸಚಿವೆ ಜಯಮಾಲಾ ಅವರು ಹಾಡಿ ಹೊಗಳಿದ್ದಾರೆ.
ಹಾಸನದ ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು, ರೇವಣ್ಣ ಬದುಕಿರುವವರೆಗೂ ಚುನಾವಣೆಯಲ್ಲಿ ಅವರಿಗೆ ಸೋಲೆಂಬುದೇ ಇಲ್ಲ, ಅವರು ಸದಾ ಶಾಸಕರಾಗುತ್ತಲೇ ಇರುತ್ತಾರೆ ಎಂದು ಹೊಗಳಿದ್ದಾರೆ.
ರೇವಣ್ಣ ಅವರು ಹಾಸನದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿದರೆ ಗೊತ್ತಾಗುತ್ತದೆ ಅವರು ಎಂತಹಾ ಆಡಳಿತಗಾರ ಎಂದು, ವಿಧಾನಸೌಧದಲ್ಲಿ ಏಕೆ ಹಾಸನದಲ್ಲಿ ಆದಂತ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಬೇಕು ಎಂಬುದು ನನಗೆ ಗೊತ್ತಾಗಿದೆ ಎಂದು ಹಾಸನ ಅಭಿವೃದ್ಧಿಯನ್ನು ಹೊಗಳಿದರು ಜಯಮಾಲಾ.

ರೇವಣ್ಣ ಸೋಲಲು ದೇವರು ಬಿಡುವುದಿಲ್ಲ
ಮಹಿಳೆಯರು, ಮಕ್ಕಳ ಮೇಲೆ ರೇವಣ್ಣ ಹೊಂದಿರುವ ಮಾನವೀಯತೆ ದೃಷ್ಠಿ ಅವರು ದೇವರನ್ನು ನಂಬುವ ಪರಿ ರೇವಣ್ಣ ಅವರನ್ನು ಎಂದಿಗೂ ಸೋಲಲು ಬಿಡುವುದಿಲ್ಲ ಎಂದ ಜಯಮಾಲಾ ಹಾಸನದಂತಹಾ ಸ್ವಚ್ಛ ನಗರವನ್ನು ನೋಡಿಲ್ಲ ಎಂದರು.

ಭಟ್ಟಾರಕ ಸ್ವಾಮಿಯ ಬಿಟ್ಟು ರೇವಣ್ಣಗೆ ಹೊಗಳಿಕೆ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭದಲ್ಲಿ ಜಯಮಾಲಾ ಅವರು ಈ ಮಾತುಗಳನ್ನು ಹೇಳಿದರು. ಭಟ್ಟಾರಕ ಸ್ವಾಮೀಜಿ ಅವರಿಗೆ ಪ್ರಶಸ್ತಿ ನೀಡಿದ ಜಯಮಾಲಾ ಹೊಗಳಿದ್ದು ಮಾತ್ರ ರೇವಣ್ಣ ಅವರನ್ನು!

ಮಾಜಿ ಸಚಿವ ಎ.ಮಂಜು ಕಿಡಿ
ಜಯಮಾಲಾ ಅವರು ಸಚಿವ ರೇವಣ್ಣ ಅವರನ್ನು ಹೊಗಳಿರುವುದಕ್ಕೆ ಮಾಜಿ ಕಾಂಗ್ರೆಸ್ ಸಚಿವ ಎ.ಮಂಜು ಕಿಡಿ ಕಾರಿದ್ದಾರೆ. ರಾಜಕೀಯ ಅಜ್ಞಾನದಿಂದ ಜಯಮಾಲಾ ಅವರು ಹೀಗೆಲ್ಲಾ ಮಾತನಾಡಿದ್ದಾರೆ. ಅವರಿಗೆ ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೆ ಎಂಬುದು ಸಹ ನೆನಪಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಆಕ್ಸಿಡೆಂಟಲ್ ಮಿನಿಸ್ಟರ್
ಹಾಡು ಹೇಳಿಕೊಂಡು, ನೃತ್ಯ ಮಾಡಿಕೊಂಡು ಆರಾಮವಾಗಿದ್ದ ಜಯಮಾಲಾ ಅವರು ಅದೃಷ್ಟವಶಾತ್ ಸಚಿವೆ ಆಗಿದ್ದಾರೆ. ಅವರು ಆಕ್ಸಿಡೆಂಟಲ್ ಮಿನಿಸ್ಟರ್ ಅಷ್ಟೆ ಅವರಿಗೆ ರಾಜಕೀಯ ಅನುಭವವಾಗಲಿ, ಅದರ ಜ್ಞಾನವಾಗಲಿ ಇಲ್ಲ ಎಂದು ಜಯಮಾಲಾ ಅವರನ್ನು ಎ.ಮಂಜು ಟೀಕಿಸಿದ್ದಾರೆ.












Click it and Unblock the Notifications