Chennapatna By Election: ಚನ್ನಪಟ್ಟಣ ಮತ ಎಣಿಕೆಗೂ ಮುನ್ನ ನಿಖಿಲ್ ಟೆಂಪಲ್ ರನ್!
ಹಾಸನ, ನವೆಂಬರ್ 18: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ 2024ರ ಮತದಾನ ಮುಕ್ತಾಯಗೊಂಡಿದೆ. ಯಾರಿಗೆ ಗೆಲುವು? ಎಂದು ಲೆಕ್ಕಾಚಾರಗಳು ಮುಂದುವರೆದಿದೆ. ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಜೋರಾಗಿದೆ. ನವೆಂಬರ್ 23ರ ಶನಿವಾರ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ. ಸಿ. ಪಿ. ಯೋಗೇಶ್ವರ ಕಾಂಗ್ರೆಸ್ ಅಭ್ಯರ್ಥಿ. ಒಟ್ಟು 31 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಅಡಗಿದೆ. ಚುನಾವಣೆಯಲ್ಲಿ ಯಾರಿಗೆ ಗೆಲುವು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ನವೆಂಬರ್ 13ರ ಬುಧವಾರ ಚನ್ನಪಟ್ಟಣದಲ್ಲಿ ಮತದಾನ ನಡೆದಿತ್ತು. ಶೇ 88.80ರಷ್ಟು ಮತದಾನವಾಗಿದೆ. ಮತದಾನ ಪ್ರಮಾಣ ಹೆಚ್ಚಾಗಿದ್ದು, ಯಾರಿಗೆ ಗೆಲುವು? ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪ್ರತಿಷ್ಠೆ ಚುನಾವಣಾ ಫಲಿತಾಂಶದಲ್ಲಿ ಅಡಗಿದೆ.
ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್: ಚನ್ನಪಟ್ಟಣದ ಮತ ಎಣಿಕೆಗೂ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ಸೋಮವಾರ ಅವರು ಹಾಸನ ಜಿಲ್ಲಾ ಪ್ರವಾಸದಲ್ಲಿದ್ದು, ಪತ್ನಿ ರೇವತಿ, ಪುತ್ರನ ಜೊತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಸೋಮವಾರ ನಿಖಿಲ್ ಕುಮಾರಸ್ವಾಮಿ ಹಾಸನ ಜಿಲ್ಲೆಯ ಹಳೇಕೋಟೆ ಗ್ರಾಮದ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಅಲ್ಲದೇ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಶ್ರೀ ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ವರೂಪ್ ಪ್ರಕಾಶ್, ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯ ನಾರಾಯಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪತ್ನಿ ರೇವತಿ ಜೊತೆಗೆ ನಿಖಿಲ್ ಕುಮಾರಸ್ವಾಮಿ ಹಾಸನ ಜಿಲ್ಲೆಯ ಯಲಿಯೂರು ಗ್ರಾಮದಲ್ಲಿರುವ ಶ್ರೀ ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಶ್ರೀ ದೇವಿರಮ್ಮಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ, 2013ರಲ್ಲಿ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ 2024ರ ಚನ್ನಪಟ್ಟಣ ಉಪ ಚುನಾವಣೆ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದಾರೆ. 2023ರಲ್ಲಿ ಎಚ್. ಡಿ. ಕುಮಾರಸ್ವಾಮಿ ಗೆದ್ದಿದ್ದ ಕ್ಷೇತ್ರದಲ್ಲಿ ಜಯಗಳಿಸಿ ಹಿಂದಿನ ಎರಡು ಚುನಾವಣೆ ಸೋಲನ್ನು ಮರೆಯುವ ಭರವಸೆಯಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿಯ ನಾಯಕರು ಪ್ರಚಾರ ನಡೆಸಿದ್ದಾರೆ. ಉಪ ಚುನಾವಣೆ ಮತದಾನ ಮುಕ್ತಾಯವಾದ ಬಳಿಕ ನಿಖಿಲ್ ಗೆಲ್ಲುವುದು ಪಕ್ಕಾ ಎಂದು ಬಿಜೆಪಿ, ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಸಿ. ಪಿ. ಯೋಗೇಶ್ವರ ನಡುವೆ ಪ್ರಬಲ ಪೈಪೋಟಿ ಇದೆ. ಕ್ಷೇತ್ರದಲ್ಲಿ ವೈಯಕ್ತಿಯ ಮತ ಬ್ಯಾಂಕ್ ಹೊಂದಿರುವ ಸಿ. ಪಿ. ಯೋಗೇಶ್ವರಗೆ ಈ ಬಾರಿ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಬೆಂಬಲವೂ ಇದೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.












Click it and Unblock the Notifications