ರೇವಣ್ಣ ಕುಟುಂಬದವರೆಲ್ಲ ಸೋಲಬೇಕು; ಹಾಸನಾಂಬೆಗೆ ಪತ್ರ!
ಹಾಸನ, ನವೆಂಬರ್ 08; ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ತೆರೆ ಬಿದ್ದಿದೆ. ಸೋಮವಾರ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಭಕ್ತರು ದೇವಿಗೆ ಹರಕೆ ಹೊತ್ತು ಹಾಕಿದ ಪತ್ರಗಳು ಸಹ ಎಣಿಕೆ ಸಂದರ್ಭದಲ್ಲಿ ಸಿಗುತ್ತಿವೆ.
ಹುಂಡಿ ಎಣಿಕೆ ವೇಳೆ ಸಿಕ್ಕಿದ ಪತ್ರವೊಂದು ಕುತೂಹಲಕ್ಕೆ ಕಾರಣವಾಗಿದೆ. ಹೊಳೆನರಸೀಪುರದ ಜನರಿಗೆ ಒಳ್ಳೆದು ಮಾಡು ತಾಯಿ ಎಂದು ಬರೆದಿರುವ ಪತ್ರದಲ್ಲಿ ವಿಚಿತ್ರ ಬೇಡಿಕೆಯೊಂದನ್ನು ಇಡಲಾಗಿದೆ.
ಮುಚ್ಚಿದ ಹಾಸನಾಂಬೆ ದೇವಾಲಯ; 10 ದಿನದ ಜಾತ್ರೆಗೆ ವಿದ್ಯುಕ್ತ ತೆರೆ
'ತಾಯಿ ಹಾಸನಾಂಬೆ ನಿನ್ನ ಕೃಪೆಯಿಂದ ಹೊಳೆನರಸೀಪುರದ MLA ಬದಲಾಗಬೇಕು' ಎಂದು ಬೇಡಿಕೆ ಇಡಲಾಗಿದೆ. ಹೊಳೆನರಸೀಪುರದ ಶಾಸಕರು ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ. ಕ್ಷೇತ್ರದಲ್ಲೇ ಅವರು ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ.
ಹಾಸನಾಂಬೆ ಜಾತ್ರೆ ಮುಕ್ತಾಯ; ಹುಂಡಿ ಸಂಗ್ರಹ ಕುಸಿತ!
ಪತ್ರದ ಪೂರ್ಣ ವಿವರ
ತಾಯಿ ಹಾಸನಾಂಬೆ...!
ನಿನ್ನ ಕೃಪೆಯಿಂದ ಹೊಳೆನರಸೀಪುರದ MLA ಬದಲಾಗಬೇಕು ಜನರ ಕಷ್ಟದಿಂದ ಪಾರು ಮಾಡಬೇಕು. H D ರೇವಣ್ಣನ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರೆಲ್ಲರನ್ನು ಸೋಲಿಸಿಬಿಡು ತಾಯಿ...!
ಅವರ ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಒಳ್ಳೇದು ಮಾಡು ತಾಯಿ H. N. Pura ಜನತೆಗೆ...
ಹಾಸನಾಂಬೆ ಜಾತ್ರೆ ಮುಗಿದಿದ್ದು ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಹೊಳೆನರಸೀಪುರ ಎಂಎಲ್ಎ ಬದಲಾಗಬೇಕು ಎಂಬ ಪತ್ರ ಹುಂಡಿಯಲ್ಲಿ ಸಿಕ್ಕಿದೆ.#Hasanamba #HasanambaTemple #Hundi #holenarasipura pic.twitter.com/I6nIkwCodl
— oneindiakannada (@OneindiaKannada) November 8, 2021
ಎಚ್. ಡಿ. ರೇವಣ್ಣ ಕುಟುಂಬದಲ್ಲಿ ಎಚ್. ಡಿ. ರೇವಣ್ಣ ಹೊಳೆನರಸೀಪುರದ ಶಾಸಕರು. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನದ ಸಂಸದರು. ರೇವಣ್ಣ ಪತ್ನಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿ ಸದಸ್ಯರು.
ಚಿತ್ರ-ವಿಚಿತ್ರ ಹರಕೆಗಳು; ಹೊಳೆನರಸೀಪುರ ಶಾಸಕರು ಬದಲಾಗಬೇಕು ಎಂಬುದು ಮಾತ್ರವಲ್ಲ ಇನ್ನೂ ಹಲವಾರು ಹರಕೆಯ ಪತ್ರಗಳು ಹುಂಡಿಯಲ್ಲಿ ಸಿಕ್ಕಿವೆ.
ನನ್ನ ದೊಡ್ಡ ಮಗನಿಗೆ ಮದುವೆ ಮಾಡು, ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ರೂ. ನಿನ್ನ ಹುಂಡಿಗೆ ಹಾಕುವೆ, ನನಗೆ ಬೇಗ ಪ್ರಮೋಷನ್ ಕೊಡಮ್ಮ, ಒಂದು ವರ್ಷದೊಳಗೆ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸು, ಭೂಗಳ್ಳನಿಂದ ನನ್ನ ಭೂಮಿ ಕೊಡಿಸು ಸೇರಿದಂತೆ ವಿವಿಧ ಬೇಡಿಕೆಯನ್ನು ತಾಯಿಗೆ ಇಡಲಾಗಿದೆ.
ಗುಂಡಿ ಸರಿ ಮಾಡಿಸು; ಹಾಸನದ 35ನೇ ವಾರ್ಡ್ ನಿವಾಸಿಯೊಬ್ಬರು ನಮ್ಮ ಬೀದಿಯ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಅದನ್ನು ಸರಿ ಮಾಡಿಸು ತಾಯಿ ಎಂದು ಪತ್ರ ಬರೆದಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬರು ಪರೀಕ್ಷೆಯಲ್ಲಿ ಶೇ 90ರಷ್ಟು ಪರ್ಸಂಟೇಜ್ ಬರುವ ಹಾಗೆ ಮಾಡು ಎಂದು ಪತ್ರ ಬರೆದು ಬೇಡಿಕೆ ಇಟ್ಟಿದ್ದಾನೆ.
ಬಾಗಿಲು ಮುಚ್ಚಿದ ದೇವಾಲಯ; ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ಶನಿವಾರ ತೆರೆ ಬಿದ್ದಿದೆ. ಧಾರ್ಮಿಕ ವಿಧಿವಿಧಾನಗಳ ಮೂಲಕ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, 9 ದಿನಕ್ಕೆ ದರ್ಶನ ಮಹೋತ್ಸವ ಮುಕ್ತಾಯಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಜೆ. ಗೌಡ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಎ. ಪರಮೇಶ್ ಮುಂತಾದವರು ಪಾಲ್ಗೊಂಡಿದ್ದರು.
ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಕೆ. ಗೋಪಾಲಯ್ಯ, "ಈ ಬಾರಿ ಅಂದಾಜು 4 ಲಕ್ಷ ಜನರಿಂದ ದೇವಿ ದರ್ಶನವಾಗಿದೆ ಎಲ್ಲವೂ ಅಚ್ಚು ಕಟ್ಟಾಗಿ ನಡೆದಿದೆ" ಎಂದರು.
"ದೇವಿಯ ದರ್ಶನಕ್ಕೆ ಜಿಲ್ಲೆಯ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯಗಳಿಂದ ಬಂದಂತಹ ಭಕ್ತಾದಿಗಳಿಗೆ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಮಾರ್ಗಸೂಚಿಗಳ ಅನ್ವಯ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು" ಎಂದು ಹೇಳಿದರು.