ಹುಲಿ ಎಲ್ಲಿದ್ದರೂ ಹುಲಿಯೇ: ಅಪ್ಪನನ್ನು ಹಾಡಿಹೊಗಳಿದ ಬಿವೈ ವಿಜಯೇಂದ್ರ
ಹಾಸನ, ಮೇ 28: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದರೂ ಬಿ.ವೈ. ವಿಜಯೇಂದ್ರ ಉತ್ಸಾಹ ಮಾತ್ರ ಕುಂದಿಲ್ಲ. ತಮ್ಮ ತಂದೆ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿದರೂ ಮಗ ವಿಜಯೇಂದ್ರ ಅಭಿಮಾನ ತಗ್ಗಿಲ್ಲ. ತಮ್ಮ ತಂದೆ ಯಾವತ್ತಿದ್ದರೂ ಹೋರಾಟಗಾರರು, ಪುಟಿದೆದ್ದು ಬರುತ್ತಾರೆ ಎಂದು ವಿಜಯೇಂದ್ರ ಇಂದು ಶನಿವಾರ ಹೇಳಿದ್ಧಾರೆ.
ಹೊಳೆನರಸೀಪುರದಲ್ಲಿ ನಡೆದ ಬಸವಜಯಂತಿ ಮತ್ತು ಡಾ. ಶಿವಕುಮಾರಸ್ವಾಮೀಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ತಮ್ಮ ತಂದೆಯನ್ನು ಹಾಡಿಹೊಗಳಿದ್ದಾರೆ.
"ಬೇಟೆಯಾಡುವ ಹುಲಿಯನ್ನು ಬೋನಿನಲ್ಲಿ ತಂದು ಬಿಟ್ಟರೆ ಆ ಹುಲಿ ಬೇಟೆ ಆಡುವುದನ್ನು ನಿಲ್ಲಿಸುತ್ತಾ? ಹುಲಿ ಬೋನಿನಲ್ಲಿದ್ದರೂ ಹುಲ್ಲು ತಿನ್ನುವುದಿಲ್ಲ, ಬೇಟೆ ಆಡುವುದನ್ನು ಮರೆಯುವುದಿಲ್ಲ" ಎಂದು ಯಡಿಯೂರಪ್ಪನವರ ತಾಕತ್ತನ ಬಗ್ಗೆ ಬಿ.ವೈ. ವಿಜಯೇಂದ್ರ ಬಣ್ಣನೆ ಮಾಡಿದ್ದಾರೆ.

ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸಿದವರು ಬಿಎಸ್‌ವೈ:
ಕರ್ನಾಟಕ ರಾಜ್ಯದಲ್ಲಿ ಕಳೆದ 20-30 ವರ್ಷಗಳಿಂದ ತುಳಿತಕ್ಕೊಳಗಾಗಿರುವ ಎಲ್ಲಾ ಸಮಾಜದವರನ್ನು ಎದ್ದು ನಿಲ್ಲಿಸಿ ಅವರ ಕಣ್ಣೀರನ್ನು ಒರೆಸುವಂತಹ, ನ್ಯಾಯವನ್ನು ಒದಗಿಸುವಂತಹ ಕೆಲಸ ಮಾಡಿದ್ದು ಯಡಿಯೂರಪ್ಪನವರು. ಅವರು ಈ ರಾಜ್ಯದಲ್ಲಿ ಒಂದಲ್ಲ, ಎರಡಲ್ಲ ನಾಲ್ಕ ಬಾರಿ ಮುಖ್ಯಮಂತ್ರಿಗಳಾಗಿ ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ನೀಡಿ ಸಮಾಜದ ಎಲ್ಲಾ ವರ್ಗಗಳನ್ನೂ ಎತ್ತಿಹಿಡಿಯುವ ಕೆಲಸವನ್ನು ಮಾಡಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಇದೇ ಸಂದರ್ಭದಲ್ಲಿ ಹೇಳಿದ್ಧಾರೆ.
ಬಸವಣ್ಣನವರ ಆದರ್ಶದ ಬಗ್ಗೆ ಮಾತನಾಡಿದ ಅವರು, ಬಸವಣ್ಣನವರ ಕ್ರಾಂತಿ ಲಿಂಗಾಯ ಮಠಗಳಿಗಷ್ಟೇ ಅಲ್ಲ ಆದಿಚುಂಚನಗಿರಿ ಮಠ ಸೇರಿ ಎಲ್ಲಾ ಮಠಗಳಿಗೂ ಪ್ರೇರಣೆ ಕೊಟ್ಟಿದೆ ಎಂದು ತಿಳಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರುಗಳಿಗೆ ಪ್ರೇರಣೆ ಕೊಟ್ಟಿರುವುದು ಅದೇ ಅಣ್ಣ ಬಸವಣ್ಣನವರೇ ಎಂದಿದ್ದಾರೆ.

ನಮ್ಮ ವೀರಶೈವ ಮಠಗಳು ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹ ಉಣಬಡಿಸುತ್ತಾ ಬಂದಿವೆ. ನಮ್ಮ ರಾಜ್ಯ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ನಮ್ಮ ಮಠ ಮಾನ್ಯಗಳ ಕಾರ್ಯವನ್ನು ಮರೆಯಲು ಸಾಧ್ಯವಿಲ್ಲ ಎಂದು ಮಠಗಳ ಕಾರ್ಯವನ್ನು ವಿಜಯೇಂದ್ರ ಹೊಗಳಿದ್ಧಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications