ಸಕಲೇಶಪುರದಲ್ಲಿ ದಲಿತನ ಮೇಲೆ ದೌರ್ಜನ್ಯ, ಭಜರಂಗದಳದ ವಿರುದ್ಧ ಭುಗಿಲೆದ್ದ ಆಕ್ರೋಶ
ಹಾಸನ, ಆಗಸ್ಟ್, 24: ರಕ್ಷಣೆ ಹೆಸರಿನಲ್ಲಿ ಭಜರಂಗದಳ ಕಾರ್ಯಕರ್ತರು ವಿನಾಕಾರಣ ದಲಿತರಿಗೆ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ಪೊಲೀಸರು ಸಹ ಇವರಿಗೆ ಬೆನ್ನುಲುಬಾಗಿ ನಿಂತಿದ್ದಾರೆಂದು ದಲಿತ ಪರ ಸಂಘಟನೆಗಳು ಆರೋಪಿಸಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟಿದ್ದು, ಮಿನಿವಿಧಾನಸೌಧ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಶೋಕ ರಸ್ತೆಯಿಂದ ಷಾಪ್ ಸಿದ್ದೇಗೌಡ ಶಾಲೆಯ ಸಮೀಪ ಬಿ.ಎಂ ರಸ್ತೆಗೆ ಬಂದು, ಹಳೇ ಬಸ್ ನಿಲ್ದಾಣದಲ್ಲಿ ಕೆಲಕಾಲ ರಸ್ತೆ ತಡೆ ಮಾಡಿ ಬಹಿರಂಗ ಸಭೆ ನಡೆಸಿದರು.
ಈ ಸಂದರ್ಭರ್ದಲ್ಲಿ ದಲಿತ ಮುಖಂಡರು ಮಾತನಾಡಿ ಸಕಲೇಶಪುರ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಕಳೆದ ಎರಡು ವರ್ಷಗಳಿಂದ ಈಚೆಗೆ ಹಿಂದುತ್ವದ ಹೆಸರಿನಲ್ಲಿ ಭಜರಂಗದಳದ ರಘು ಮತ್ತು ಸಹಚರರು ಗಲಭೆ ಎಬ್ಬಿಸುತ್ತಿದ್ದಾರೆ. ಇಂತವರಿಗೆ ಠಾಣೆಯಲ್ಲಿ ಪೋಲಿಸರು ರಾಜ ಮರ್ಯಾದೆ ನೀಡುತ್ತಿರುವುದು ಖಂಡನೀಯವಾಗಿದೆ. ಶನಿವಾರ ಸಾಕಲು ಹಸು-ಕರುವನ್ನು ತರುತ್ತಿದ್ದ ಹಲಸುಲಿಗೆ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜು ಅವರ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ಭಜರಂಗ ದಳದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ದೀಪುವನ್ನು ಕೂಡಲೆ ಬಂಧಿಸಬೇಕು. ಹಾಗೂ ಈ ಬಗ್ಗೆ ಕೇಳಲು ಹೋದ ದಲಿತ ಹೋರಾಟಗಾರರ ಮೇಲೆ ಮೊಕ್ಕದಮೆ ದಾಖಲಿಸಿರುವ ಡಿವೈಎಸ್‌ಪಿ ಉದಯ್ ಭಾಸ್ಕರ್ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು. ನಂತರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್‌ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೊಳೆನರಸೀಪುರ ಡಿವೈಎಸ್‌ಪಿ ಮುರುಳಿಧರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ವಕೀಲ ವೇಣು, ವಕೀಲ ರಾಧಾಕೃಷ್ಣ, ಬೈಕೆರೆ ದೇವರಾಜ್, ವಳಲಹಳ್ಳಿ ವೀರೇಶ್, ಹೆತ್ತೂರು ನಾಗರಾಜ್, ಲಕ್ಷ್ಮಣ್ ಕೀರ್ತಿ, ಎಸ್.ಎನ್ ಮಲ್ಲಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
ಘಟನೆಯ ವಿವರ: ಸಾಕಲು ಹಸು ತರುತ್ತಿದ್ದ ರೈತನ ವಾಹನವನ್ನು ಅಡ್ಡಗಟ್ಟಿ ಭಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಮಂಜು ಎಂಬುವವರು ಸಾಕಲು ವಾಹನದಲ್ಲಿ ಹಸು ತರುತ್ತಿದ್ದರು. ಈ ವೇಳೆ ವಾಹನವನ್ನು ಭಜರಂಗದಳ ಕಾರ್ಯಕರ್ತ ದೀಪು ಎಂಬುವವನು ಅಡ್ಡಗಟ್ಟಿದ ಮಂಜು ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ.

ಕಸಾಯಿಖಾನೆಗೆ ಹಸುವನ್ನು ಸಾಗಿಸುತ್ತಿದ್ದೀರಾ ಎಂದು ದೀಪು ಧಮ್ಕಿ ಹಾಕಿದ್ದಾನೆ. ಇನ್ನು ಈ ವೇಳೆ ಹಸು ಖರೀದಿಸಿರುವ ಬಿಲ್ ತೋರಿಸಿದರೂ ಬಿಡದೆ ದೌರ್ಜನ್ಯ ಮಾಡಿದ್ದಾನೆ. ಆದ್ದರಿಂದ ದೀಪು ವಿರುದ್ಧ ವಿವಿಧ ದಲಿತ ಪರ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನ: ಭಜರಂಗದಳ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ದೀಪು ನನ್ನು ಬಂಧಿಸುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು.












Click it and Unblock the Notifications