ಗೊಮ್ಮಟಗಿರಿಯಲ್ಲಿ ಮಹಾಮಸ್ತಕಾಭಿಷೇಕದ ಅಮೃತ ಮಹೋತ್ಸವ: ಏನಿದರ ವಿಶೇಷ?
ಮೈಸೂರು, ಡಿಸೆಂಬರ್ 10: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ನಡೆಯುವ ಮಹಾಮಸ್ತಕಾಭಿಷೇಕ ಇತಿಹಾಸ ಪ್ರಸಿದ್ಧಿಯಾಗಿದೆ. ಅದರಂತೆ ರಾಜ್ಯದ ಹಲವೆಡೆ ಇರುವ ಗೊಮ್ಮಟೇಶ್ವರನಿಗೆ ಹಲವು ಸಂದರ್ಭಗಳಲ್ಲಿ ಮಸ್ತಕಾಭಿಷೇಕ ನಡೆಯುತ್ತಿದ್ದು, ಇದೀಗ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಇಲವಾಲ ಬಳಿಯ ಬೆಟ್ಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಭಗವಾನ್ ಬಾಹು ಬಲಿಗೆ 75ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆ ನಡೆಯುತ್ತಿದ್ದು, ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ.
75ನೇ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆಯು ಡಿ.12ರಿಂದ ಆರಂಭವಾಗಿ 15ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದ್ದು ದೂರದ ಊರುಗಳಿಂದ ಭಕ್ತರು ಆಗಮಿಸಲಾರಂಭಿಸಿದ್ದಾರೆ. ಗೊಮ್ಮಟಗಿರಿ ಸೇವಾ ಸಮಿತಿಯು ಕಾರ್ಯಕ್ರಮವನ್ನು ಅದ್ಧೂರಿ ಮತ್ತು ಯಶಸ್ವಿಯಾಗಿ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಗೊಮ್ಮಟಗಿರಿ ಕ್ಷೇತ್ರದಲ್ಲಿ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆಯ ವೇಳೆ ಏನೆಲ್ಲ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂಬುದರ ಕುರಿತಂತೆ ಸಮಿತಿ ಅಧ್ಯಕ್ಷ ಮನ್ಮಥ್ ರಾಜ್ ಅವರು ಮಾಹಿತಿಗಳನ್ನು ನೀಡಿದ್ದು. ಡಿ.12ರಂದು ಪೂರ್ವಭಾವಿ ಸಭೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಡಿ.13, 14, 15ರ ಮೂರೂ ದಿನ ಬೆಳಗ್ಗೆ 11ಕ್ಕೆ ಮಹಾ ಮಸ್ತಕಾಭಿಷೇಕ ಜರುಗಲಿದೆ ಎಂದು ತಿಳಿಸಿದ್ದಾರೆ.
ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗಲಿರುವ ಗಣ್ಯರು
ಡಿ.13ರಂದು ಬೆಳಗ್ಗೆ 10.30ಕ್ಕೆ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಅಭಿನವ ಚಾರುಕೀರ್ತಿ ಸ್ವಾಮೀಜಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಡಾ.ಡಿ. ವೀರೇಂದ್ರ ಹೆಗ್ಗಡೆ, ಸಚಿವ ಡಿ.ಸುಧಾಕರ್ ಇನ್ನಿತರರು ಹಾಜರಿದ್ದರೆ, ಶಾಸಕ ಜಿ.ಡಿ.ಹರೀಶ್‌ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಡಿ.14ರಂದು ಮಧ್ಯಾಹ್ನ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು, ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸುವರು. ಡಿ.15ರಂದು ಬೃಹತ್ ಸಭಾಂಗಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಇನ್ನು ಬಾಹುಬಲಿಗೆ ಎಳನೀರು, ಕಬ್ಬಿನಹಾಲು, ಹಾಲು, ಮೊಸರು, ಶ್ರೀಗಂಧ, ಕಷಾಯ, ಅರಿಶಿಣ ಮೊದಲಾದ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ನಡೆಲಿದೆ. ಸಾರಿಗೆ ಸಂಸ್ಥೆ ವತಿಯಿಂದ ಕ್ಷೇತ್ರಕ್ಕೆ ವಿಶೇಷ ಬಸ್ ವ್ಯವಸ್ಥೆಯೂ ಇರಲಿದೆ.
ಏಕಶಿಲೆಯಲ್ಲಿ ನಿರ್ಮಾಣಗೊಂಡ ಬಾಹುಬಲಿ
ಹಾಗೆನೋಡಿದರೆ ಗೊಮ್ಮಟಗಿರಿ ಕ್ಷೇತ್ರ ಜೈನರಿಗೆ ಪವಿತ್ರ ತಾಣವಾಗಿ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿಯೂ ಆಕರ್ಷಿಸುತ್ತಿದೆ. ಹಾಗಾಗಿಯೇ ಪ್ರತಿ ದಿನವೂ ಇಲ್ಲಿಗೆ ಪ್ರವಾಸಿಗರು ಮತ್ತು ಜೈನಭಕ್ತರು ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಹೋಗುತ್ತಿರುತ್ತಾರೆ. ಈ ಕ್ಷೇತ್ರದ ಕುರಿತಂತೆ ನೋಡುತ್ತಾ ಹೋದರೆ ಇಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ ಸುಮಾರು ಎಂಟು ಶತಮಾನಗಳ ಇತಿಹಾಸ ಇರುವುದು ಗೊತ್ತಾಗುತ್ತದೆ. ಇನ್ನೂರು ಅಡಿ ಎತ್ತರ, ಇನ್ನೂರೈವತ್ತು ಅಡಿ ಅಗಲದ ಹೆಬ್ಬಂಡೆಯಲ್ಲಿ ಹದಿನಾರು ಅಡಿ ಎತ್ತರದ ಏಕಶಿಲೆಯಲ್ಲಿ ಗೊಮ್ಮಟೇಶ್ವರನನ್ನು ನಿರ್ಮಿಸಲಾಗಿದೆ.

ಈ ಮೂರ್ತಿ ಬಳಿಗೆ ತಲುಪಬೇಕಾದರೆ ಹೆಬ್ಬಂಡೆಯ ಸುಮಾರು ತೊಂಬತ್ತು ಮೆಟ್ಟಿಲನ್ನು ಹತ್ತಿ ಸಾಗಬೇಕು. ಹೀಗೆ ಸಾಗಿದ ಬಳಿಕ ಗೊಮ್ಮಟೇಶ್ವರನ ದರ್ಶನವಾಗುತ್ತದೆ. ಈ ಗೊಮ್ಮಟೇಶ್ವರನ ನಿರ್ಮಾಣದ ಕುರಿತಂತೆ ಯಾವುದೇ ಶಾಸನಗಳು ಲಭ್ಯವಾಗಿಲ್ಲ. ಹೀಗಾಗಿ ಕೆಲವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಈ ಭಾಗದಲ್ಲಿದ್ದ ಗಂಗರಸರು ಈ ಮೂರ್ತಿಯನ್ನು ನಿರ್ಮಿಸಿರಬಹುದೆಂದು ಹೇಳಿದರೆ ಮತ್ತೆ ಕೆಲವರು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಚಾವುಂಡರಾಯನೇ ಇದನ್ನು ಕೆತ್ತಿರಬಹುದೆಂದು ಊಹೆ ಮಾಡುತ್ತಾರೆ.
ಗೊಮ್ಮಟಗಿರಿ ಕ್ಷೇತ್ರಕ್ಕೆ ತೆರಳುವುದು ಹೇಗೆ?
ಈ ಕ್ಷೇತ್ರಕ್ಕೆ ಸಮೀಪವಿರುವ ರಟ್ನಳ್ಳಿ ಬ್ರಹ್ಮದೇವರ ದೇವಾಲಯಕ್ಕೂ ಇಲ್ಲಿಗೂ ಸಂಬಂಧವಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಅದೇನೇ ಇರಲಿ. ಇಲ್ಲಿರುವ ಬಾಹುಬಲಿ ವಿಗ್ರಹದ ಬಗ್ಗೆ ಹೇಳಬೇಕೆಂದರೆ ಜೈನತೀರ್ಥಂಕರರ ಸಾಂಪ್ರದಾಯಿಕ ಚಿಹ್ನೆಯಾದ ಹಾವು ಬಾಹುಬಲಿಯ ಪಾದತಳದಿಂದ ಮುಡಿಯವರೆಗೆ ಆವರಿಸಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿರುವ ಮೂರ್ತಿ ಆಕರ್ಷಕವಾಗಿದೆ. ಪ್ರಶಾಂತತೆ ಮೊಗದಲ್ಲಿ ಕಾಣಿಸುತ್ತದೆ. ಇಲ್ಲಿನ ಬೆಟ್ಟದ ತಪ್ಪಲಿನ ಬಲಭಾಗದಲ್ಲಿ ವರ್ಧಮಾನ ಕಾಲದ 24ಜೈನ ತೀರ್ಥಂಕರರ ಕೂಟಗಳು ಎಡಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ದಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದ ಕೂಟ, ಹಾಗೂ ಪಕ್ಕದಲ್ಲೇ ಜಲಮಂದಿರವೂ ಇರುವುದು ಗಮನಾರ್ಹವಾಗಿದೆ.
ಗೊಮ್ಮಟಗಿರಿ ಕ್ಷೇತ್ರಕ್ಕೆ ಮೈಸೂರು ಕಡೆಯಿಂದ ತೆರಳುವವರು ಮೈಸೂರಿನಿಂದ ಹುಣಸೂರು ರಸ್ತೆಯಲ್ಲಿ ತೆರಳಿ ಇಲವಾಲ ದಾಟಿ ಮುಂದೆ ಸಾಗಿದರೆ ಬಲಬದಿಯಲ್ಲಿ ಗೊಮ್ಮಟಗಿರಿಗೆ ತೆರಳುವ ಮಾರ್ಗ ಸಿಗುತ್ತದೆ. ಅದರಲ್ಲಿ ಸಾಗಿದರೆ ಕ್ಷೇತ್ರವನ್ನು ತಲುಪಬಹುದು. ಹಾಗೆಯೇ ಮಂಗಳೂರು, ಕೊಡಗು ಹಾಸನ ಕಡೆಯಿಂದ ಬರುವವರು ಬಿಳಿಕೆರೆ ದಾಟಿ ಮುಂದೆ ಬಂದರೆ ಮನುಗನಹಳ್ಳಿ ಸಿಗುತ್ತದೆ. ಇಲ್ಲಿ ಎಡಕ್ಕೆ ಗೊಮ್ಮಟಗಿರಿ ಕ್ಷೇತ್ರಕ್ಕೆ ಸ್ವಾಗತ ನೀಡುವ ಸ್ವಾಗತಫಲಕದ ರಸ್ತೆಯಲ್ಲಿ ಸಾಗಿದರೆ ಕ್ಷೇತ್ರವನ್ನು ತಲುಪಲು ಸಾಧ್ಯವಾಗುತ್ತದೆ.












Click it and Unblock the Notifications