ಅಕ್ರಮ ಗಣಿಗಾರಿಕೆ ತಡೆಗೆ ಹಾಸನದಲ್ಲಿ ಧರಣಿ
ಹಾಸನ, ಜುಲೈ 5: ಪರಿಸರದ ಕಾಳಜಿ ಹೊಂದಿರುವ ಪರಿಸರಪ್ರೇಮಿಗಳಿಬ್ಬರು ಅರಸೀಕೆರೆ ತಾಲೂಕು ಕಣಕಟ್ಟೆ ಹೋಬಳಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ನೀಲಕಂಠಪ್ಪ ಮತ್ತು ವೀರಭದ್ರಪ್ಪ ಎಂಬುವರೇ ಅಕ್ರಮ ಗಣಿಗಾರಿಕೆ ವಿರುದ್ಧ ಧರಣಿ ನಡೆಸುತ್ತಿದ್ದು, ಈಗಾಗಲೇ ಈ ಸಂಬಂಧ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಈಗಾಗಲೇ ಕಣಕಟ್ಟೆ ಹೋಬಳಿ ಸುತ್ತ ಮುತ್ತ ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೂ ತರಲಾಗಿದೆ. ಅಲ್ಲದೆ, ಜಿಲ್ಲಾಡಳಿತ, ತಾಲೂಕು ಆಡಳಿತ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ. ಅಕ್ರಮ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರಲ್ಲದೆ, ಈಗಾಗಲೇ ಕಣಕಟ್ಟೆ ಹೋಬಳಿ ಸುತ್ತಮುತ್ತ ಕಾನೂನು ಬಾಹಿರವಾಗಿ ನೂರಾರು ಲೋಡ್ ಜಲ್ಲಿಯನ್ನು ಯಾವುದೇ ರಾಜಧನ ನೀಡದೆ ಸರಕಾರಕ್ಕೆ ವಂಚಿಸಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿವರೆಗೆ ಬೆಂಗಳೂರಿನಿಂದ ಪಾದಯಾತ್ರೆ ಮಾಡಿದ್ದರು. ಆದರೆ ನಮ್ಮ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಿಸಿದವರ ಗಮನಸೆಳೆಯಲು ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು.












Click it and Unblock the Notifications