Hagaribommanahalli Elections: ಕ್ಷೇತ್ರದಲ್ಲಿ ಹಾವು-ಏಣಿ ಆಟ, ಈ ಬಾರಿ ಗೆಲುವು ಯಾರಿಗೆ?
ವಿಜಯನಗರ ,ಮಾರ್ಚ್ 24: ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಸ್ವತಂತ್ರ ಜಿಲ್ಲೆಯಾಗಿರುವ ವಿಜಯನಗರ ಗತ ವೈಭವವನ್ನು ಸಾರುವ ವಿಜಯನಗರ ಸಮ್ರಾಜ್ಯದ ತವರು. ವಿಜಯನಗರ ಜಿಲ್ಲೆಯ ಒಟ್ಟು ಆರು ತಾಲೂಕು ಕೇಂದ್ರದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವು ರಾಜಕೀಯ ಹಾವು ಏಣಿ ಆಟಕ್ಕೆ ಸಾಕ್ಷಿಯಾಗುತ್ತಿದೆ.
ವಿಜಯನಗರ ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿ ಕ್ಷೇತ್ರ, ಕೊಟ್ಟೂರೇಶ್ವರ ದೇವಸ್ಥಾನ, ನಂದಿಹಳ್ಳಿಯ ಚರಂತಪ್ಪ ಅಜ್ಜನ ಮಠ, ತಂಬ್ರಹಳ್ಳಿ ಗ್ರಾಮದಲ್ಲಿ ಶ್ರೀ ಬಂಡೆ ರಂಗನಾಥ ಸ್ವಾಮಿ ಗುಡ್ಡ, ಆರ್.ಎಸ್.ಎಸ್. ಸಂಘದ ರಾಸ್ಟ್ರೋತಾನ ಶಾಲೆ ಹೀಗೆ ಹಲವು ವಿಷಯಗಳಲ್ಲಿ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.

ಎಣ್ಣೆ ಕಾಳು ಬೆಳೆಗಳ ಹಾಗೂ ಎಣ್ಣೆ ಉತ್ಪಾದನೆಯ ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿಯಲ್ಲಿ ವ್ಯವಸಾಯಕ್ಕೆ ಸೂಕ್ತ ನೀರಿನ ಮೂಲ ಇಲ್ಲದ ಕಾರಣ ಕೋಳಿ ಸಾಕಾಣಿಕೆ ಕೂಡ ಇಲ್ಲಿನ ಪ್ರಮುಖ ಉದ್ಯಮವಾಗಿದೆ. ಸದ್ಯ ಅಭಿವೃದ್ಧಿಯತ್ತ ಸಾಗುತ್ತಿರುವ ಹಗರಿಬೊಮ್ಮನಹಳ್ಳಿ ಕ್ಷೇತ್ರದ ರಾಜಕೀಯ ಪರಿಚಯ ಇಲ್ಲಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ವು ತನ್ನದೇಯಾದ ಮಹತ್ವವನ್ನು ಪಡೆದಿದೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಮತ್ತು ಅವರ ಮಗ ಎಂ.ಪಿ. ರವೀಂದ್ರ ಅವರ ಕಾಲದಿಂದಲೂ ರಾಜಕೀಯದ ಹಲವು ರೋಚಕಥೇಗಳನ್ನು ಮೈ ಗುಡಿಸಿಕೊಂಡಿರುವ ನಾಡಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ತನ್ನದೇಯಾದ ವಿಶೇಷತೆಯನ್ನು ಒಳಗೊಂಡಿದೆ.
ಹಗರಿಬೊಮ್ಮನಹಳ್ಳಿ ಚುನಾವಣಾ ಫಲಿತಾಂಶ ಸದಾ ಹಾವು ಏಣಿ ಆಟ ಏಕೆಂದರೆ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಮೊದಲು ಜೆಡಿಎಸ್, ಒಮ್ಮೆ ಬಿಜೆಪಿ ಸದ್ಯ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಇಲ್ಲಿ ಒಬ್ಬನೇ ನಾಯಕ ಶಾಸಕನಾಗಿ ಆಳವಾಗಿ ಬೇರೂರಲು ಆಗುತ್ತಿಲ್ಲ. ಅಲ್ಲದೇ ಯಾರೊಬ್ಬ ಪಕ್ಷದ ಅಭ್ಯರ್ಥಿಯು ಸಹ ನಿರಂಕುಶ ನಾಯಕನಾಗಿ ಬೆಳೆಯಲು ಬಿಡುತ್ತಿಲ್ಲ.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಎಸ್.ಸಿ ಮೀಸಲು ವಿಧಾನ ಸಭಾ ಕ್ಷೇತ್ರವಾಗಿದ್ದು, 2018ರಲ್ಲಿ ಕಾಂಗ್ರೆಸ್ ಪಕ್ಷದ ಭೀಮಾ ನಾಯ್ಕ್ ಗೆದ್ದು ಬೀಗಿದ್ದರು. ಹೀಗಾಗಿ ಸದ್ಯ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕೆಲಸ ಮಾಡಿದವರಿಗೆ ಮಾತ್ರ ಮತ ಎನ್ನುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭೀಮಾ ನಾಯ್ಕ್ ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಹೆಸರು ಸಂಪಾದಿಸಿದ್ದು, ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹಾವು-ಏಣಿ ಆಟ
ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಮತ್ತು ಅವರ ಮಗ ಎಂ.ಪಿ.ರವೀಂದ್ರ ಅವರ ಕಾಲದಿಂದಲೂ ರಾಜಕೀಯದ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಏರಿಳಿತಗಳಿವೆ. 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿದ್ದ ಭೀಮಾ ನಾಯ್ಕ್ 23,865 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ನೇಮಿರಾಜ್ ನಾಯಕ್ ವಿರುದ್ಧ ಸೋಲು ಕಂಡಿದ್ದರು. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿದ್ದ ಭೀಮಾ ನಾಯ್ಕ್ 2013ರ ಚುನಾವಣೆಯಲ್ಲಿ 51,972 ಮತಗಳನ್ನು ಪಡೆದು ಕೇವಲ 125 ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದರು.
2013ರ ಚುನಾವಣೆ ಬಳಿಕ ಜೆಡಿಎಸ್ ವಿರುದ್ಧ ಬಂಡಾಯ ಎದಿದ್ದ ಭೀಮಾ ನಾಯ್ಕ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಭೀಮಾ ನಾಯ್ಕ್‌ಗೆ ಟಿಕೆಟ್ ನೀಡಿದ್ದು, 78,337 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ನೇಮಿರಾಜ್ ನಾಯಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಒಟ್ಟಾರೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆ ಹದಿನೈದು ವರ್ಷಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳ ಅಧಿಕಾರವಧಿಯನ್ನು ಕಂಡಿದೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಆಕಾಂಕ್ಷಿಗಳು
ಇನ್ನು ಹೈಮಾಂಡ್ ಅಸ್ತು ಎಂದು ಭೀಮಾ ನಾಯ್ಕ್‌ಗೆ ಈ ಬಾರಿಯೂ ಟಿಕೆಟ್ ಸಿಕ್ಕರೆ ಗೆಲುವು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಕರ್ನಾಟಕದ ಎಡಗೈ ಸಮುದಾಯದ ಒಂದು ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಒತ್ತಾಯಿಸಿದೆ. ಆದ್ದರಿಂದ ಕಾಂಗ್ರೆಸ್‌ನಿಂದ ಇತರರ ಹೆಸರುಗಳು ಸಹ ಕೇಳಿ ಬರುತ್ತಿದೆ.
ಭೀಮಾ ನಾಯ್ಕ್ ಅವರನ್ನು ಹೊರತುಪಡಿಸಿ ನಮಗೊಂದು ಅವಕಾಶ ಕೊಡಿ ಅಂತ ಎಡಗೈ ಸಮುದಾಯದ ಕಾಂಗ್ರೆಸ್‌ನ ಗುಂಪು ಕೆಪಿಸಿಸಿ ಮತ್ತು ಎಐಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹೆಗ್ಡೆಲ್ ರಾಮಣ್ಣ ಹರಿಜನ, ಎ.ಮಾನಯ್ಯ, ಎಲ್.ಮಾರೆಣ್ಣ, ಮುಂಡ್ರಿಗಿ ನಾಗರಾಜ ಸೇರಿದಂತೆ ಇತರ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಸ್ಪರ್ಧಿಸಲು ಮುಂಚೂಣಿಯಲ್ಲಿ. ಆದರೆ ಅವರ ಜೊತೆಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಂ.ಲಕ್ಷ್ಮೀನಾರಾಯಣ, ಗೋಪಾಲ್, ಭೀಮನಾಯ್ಕ್, ನಾಗರಾಜ್, ಹೀಗೆ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ನೇಮಿರಾಜ್ ನಾಯಕ್ ಕಣಕ್ಕಿಳಿದರೆ ಮಾತ್ರ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎನ್ನುವುದು ಬಹುತೇಕ ಕಾರ್ಯಕರ್ತರ ಆಗ್ರಹವಾಗಿದೆ.
ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಮಾಜಿ ಐಎಎಸ್ ಆಧಿಕಾರಿ ಎಂ.ಲಕ್ಷ್ಮೀನಾರಾಯಣ
ಮಾಜಿ ಐಎಎಸ್ ಆಧಿಕಾರಿ ಎಂ.ಲಕ್ಷ್ಮೀನಾರಾಯಣ ಹಗರಿಬೊಮ್ಮನಹಳ್ಳಿಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರು ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಸಮಾಜಕಲ್ಯಾಣ, ಬಿಬಿಎಂಪಿ ಸೇರಿ ಹಲವು ಇಲಾಖೆಯ ಮುಖ್ಯಸ್ಥರಾಗಿದ್ದರು. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಲಕ್ಷ್ಮೀನಾರಾಯಣ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಉತ್ತಮ ಸಂಘಟನೆ ಮಾಡುತ್ತಿದ್ದು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಹಾಗೂ ಪರಮೇಶ್ವರಪ್ಪ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಜೆಡಿಎಸ್ ಸ್ಪರ್ಧೆ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತಾಗಿದೆ.
Hagaribommanahalli Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಲ್.ಬಿ.ಪಿ. ಭೀಮಾ ನಾಯ್ಕ (ಕಾಂಗ್ರೆಸ್) | 78,337 | ನೇಮಿರಾಜ ನಾಯಕ(ಬಿಜೆಪಿ) | 71,105 |
| 2013 | ಎಲ್ ಬಿ ಪಿ ಭೀಮಾ ನಾಯಕ್ (ಜೆಡಿಎಸ್ ) | 51,972 | ಕೆ.ನೇಮರಾಜ ನಾಯಕ್(ಬಿಜೆಪಿ ) | 51,847 |
| 2008 | ಕೆ ನೇಮರಾಜ ನಾಯಕ್ (ಬಿಜೆಪಿ ) | 51,156 | ಎಲ್ ಬಿ ಪಿ ಭೀಮಾ ನಾಯಕ್(ಜೆಡಿಎಸ್ ) | 39,168 |
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮತದಾರರ ವಿವರ
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷದ 36 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಲ್ಲಿ ಲಿಂಗಾಯತ ಸಮುದಾಯದ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಉಳಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ ಮತ್ತು ಮುಸ್ಲಿಂ ಮತಗಳು ನಿರ್ಣಾಯಕವಾಗಲಿವೆ.
ಒಟ್ಟು ಮತದಾರರು- 2,36,000
ಪುರುಷ ಮತದಾರರು-1,19,000
ಮಹಿಳಾ ಮತದಾರರು-1,17,000
ಜಾತಿವಾರು ಮತ ಲೆಕ್ಕಾಚಾರ
ಲಿಂಗಾಯತರು-70,000
ಪರಿಶಿಷ್ಟ ಜಾತಿ-65, 000
ಕುರುಬರು-25000
ಪರಿಶಿಷ್ಟ ಪಂಗಡ -20,000
ಮುಸ್ಲಿಂ- 20,000
2018 ಹಗರಿಬೊಮ್ಮನಹಳ್ಳಿ ವಿಧಾನಸಭಾ ಚುನಾವಣಾ ಫಲಿತಾಂಶ
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಭೀಮಾ ನಾಯ್ಕ್‌ಗೆ ಟಿಕೆಟ್ ನೀಡಿದ್ದು, 78,337 ಮತಗಳನ್ನು ಪಡೆದಿದ್ದರು.ಬಿಜೆಪಿ ಅಭ್ಯರ್ಥಿ ನೇಮಿರಾಜ್ ನಾಯಕ್ 71,105 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ 7,232 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.












Click it and Unblock the Notifications