ಗಣರಾಜ್ಯೋತ್ಸವ ಸಂಭ್ರಮದ ನಡುವೆ ಅಸ್ಸಾಂನಲ್ಲಿ ನಾಲ್ಕು ಸ್ಫೋಟ
ಗುವಾಹಟಿ, ಜನವರಿ 26: ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ಭಾನುವಾರ ಬೆಳಿಗ್ಗೆ ಅಸ್ಸಾಂನ ಎರಡು ಸ್ಥಳಗಳಲ್ಲಿ ನಾಲ್ಕು ಪ್ರಬಲ ಗ್ರೆನೇಡ್ ಸ್ಫೋಟಗಳು ಸಂಭವಿಸಿವೆ.
ದಿಬ್ರುಗಡದಲ್ಲಿ ಮೂರು ಮತ್ತು ಚಾರೈಡಿಯೋ ಜಿಲ್ಲೆಯಲ್ಲಿ ಒಂದು ಕಡೆ ಸ್ಫೋಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಬ್ರುಗಡ ಜಿಲ್ಲೆಯ ಗ್ರಹಾಂ ಬಜಾರ್ ಮತ್ತು ಎ.ಟಿ. ರಸ್ತೆಯ ಗುರುದ್ವಾರದ ಪಕ್ಕದಲ್ಲಿ ಸ್ಫೋಟಗಳು ಉಂಟಾಗಿವೆ. ಮತ್ತೊಂದು ಸ್ಫೋಟ ಬೆಳಗಿನ ಎಂಟು ಗಂಟೆ ಸುಮಾರಿಗೆ ಚಾರೈಡಿಯೋ ಜಿಲ್ಲೆಯ ಸೋನಾರಿ ಸಮೀಪದ ತಿಯಾಕ್‌ಘಾಟ್ ಟಿನಿಯಾಲಿ ಎಂಬಲ್ಲಿನ ಅಂಗಡಿಯೊಂದರ ಮುಂಭಾಗ ಸಂಭವಿಸಿದೆ.
ಬೈಕ್‌ನಲ್ಲಿ ಬಂದ ಶಂಕಿ ಉಗ್ರರು ಗ್ರೆನೇಡ್ ಎಸೆದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ದಿಬ್ರುಗಡದ ತೈಲ ಪಟ್ಟಣ ದುಲಿಯಾಜಾನ್ ದಲ್ಲಿ ನಾಲ್ಕನೆಯ ಸ್ಫೋಟ ಸಂಭವಿಸಿದೆ. ಇದಲ್ಲದೆ ಟಿನ್ಸುಕಿಯಾ ಜಿಲ್ಲೆಯಲ್ಲಿ ಕೂಡ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ಬಂದಿಲ್ಲ. ಬೆಳಗಿನ 8.15-8.25ರ ಹತ್ತು ನಿಮಿಷಗಳ ಅವಧಿಯಲ್ಲಿ ಎಲ್ಲ ನಾಲ್ಕು ಸ್ಫೋಟಗಳು ಸಂಭವಿಸಿವೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿದೆ. ದಿಬ್ರುಗಡದ ತೈಲ ಪಟ್ಟಣ ದುಲಿಯಾಜಾನ್ ಟಿನಿಯಾಲಿ ಸ್ಫೋಟ ಸಂಭವಿಸಿದ ಸ್ಥಳವು ಪೊಲೀಸ್ ಠಾಣೆಯಿಂದ ಕೇವಲ ನೂರು ಮೀಟರ್ ದೂರದಲ್ಲಿದೆ.
ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
'ಅಸ್ಸಾಂನ ಕೆಲವು ಸ್ಥಳಗಳಲ್ಲಿ ನಡೆದಿರುವ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸುತ್ತೇನೆ. ಪವಿತ್ರ ದಿನದಂದು ಭಯ ಮೂಡಿಸುವ ಹೇಡಿತನದ ಪ್ರಯತ್ನವು ಜನರಿಂದ ಸಂಪೂರ್ಣವಾಗಿ ತಿರಸ್ಕಾರಕ್ಕೆ ಒಳಗಾದ ಉಗ್ರರ ಗುಂಪುಗಳ ಹತಾಶೆಯನ್ನು ತೋರಿಸುತ್ತದೆಯಷ್ಟೇ' ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications