ಅಸ್ಸಾಂನಲ್ಲಿ ವಿದೇಶೀಯ ಎಂದು ಘೋಷಣೆಯಾಗಿದ್ದ ವ್ಯಕ್ತಿ ಸಾವು; ಶವ ಪಡೆಯದ ಕುಟುಂಬ
ಗುವಾಹತಿ (ಅಸ್ಸಾಂ), ಅಕ್ಟೋಬರ್ 14: ಅಸ್ಸಾಂನಲ್ಲಿ ಎರಡು ವರ್ಷದ ಹಿಂದೆ 'ವಿದೇಶೀಯ' ಎಂದು ವಿದೇಶೀಯ ನ್ಯಾಯಮಂಡಳಿಯಿಂದ ಘೋಷಣೆ ಮಾಡಿ, ಬಂಧಿತರ ಶಿಬಿರಕ್ಕೆ ರವಾನೆ ಮಾಡಿದ್ದ ಅರವತ್ನಾಲ್ಕು ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪಡೆಯುವುದಕ್ಕೆ ಕುಟುಂಬದವರು ನಿರಾಕರಿಸಿದ್ದಾರೆ.
ದುಲಾಲ್ ಪೌಲ್ ಮೃತ ವ್ಯಕ್ತಿ. ವಿದೇಶೀಯ ಎಂದು ಘೋಷಣೆಯಾಗಿ, ಬಂಧಿತರ ಶಿಬಿರದಲ್ಲೇ ಮೃತಪಟ್ಟ ಇಪ್ಪತ್ತಾರನೇ ವ್ಯಕ್ತಿ ದುಲಾಲ್. ಎರಡು ವರ್ಷಗಳ ಹಿಂದೆ ಪೊಲೀಸರು ಬಂಧಿಸಿದಾಗ ಅವರು ಮಾನಸಿಕ ಸ್ತಿಮಿತ ಕಳೆದುಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ದುಲಾಲ್ ರನ್ನು ತೇಜ್ ಪುರ್ ನ ಬಂಧಿತರ ಶಿಬಿರದಲ್ಲಿ ಇರಿಸಲಾಗಿತ್ತು.
ತಮ್ಮ ತಂದೆ ಭಾರತೀಯರು, ಬಾಂಗ್ಲಾದೇಶಿಯರಲ್ಲ ಎಂದು ಪ್ರಮಾಣೀಕರಿಸಿದ ಮೇಲಷ್ಟೇ ಪಾರ್ಥಿವ ಶರೀರವನ್ನು ಪಡೆಯುತ್ತೇವೆ ಎಂದು ದುಲಾಲ್ ರ ಮಕ್ಕಳಾದ ಆಶಿಶ್ ಹಾಗೂ ಅಶೋಕ್ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸ್ಥಳೀಯರು ಸೋಮವಾರ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದಾರೆ. ದುಲಾಲ್ ಕುಟುಂಬಸ್ಥರನ್ನು ಮನವೊಲಿಸಲು ಅಧಿಕಾರಿಗಳು ಮಾಡಿದ ಪ್ರಯತ್ನ ಯಾವುದೇ ಫಲ ನೀಡಲಿಲ್ಲ.

ದುಲಾಲ್ ಮೂಲತಃ ಸೋನಿತ್ ಪುರ್ ಜಿಲ್ಲೆ ದೇಕಿಯಾಜುಲಿಯ ಅಲಿಸಿಂಗಾ ಗ್ರಾಮದವರು. ಮಧುಮೇಹ ಹಾಗೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದ ಅವರು, ಗುವಾಹತಿಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದಾರೆ.












Click it and Unblock the Notifications