Gadag District: ಮುದ್ರಣ ಕಾಶಿಯಲ್ಲಿ ಗೆದ್ದವರು ಯಾರು? ಸೋತುವರು ಯಾರು?
ಗದಗ, ಮೇ 13: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು ಸರ್ಕಾರ ರಚನೆ ಮಾಡಲಿದೆ. ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಗೆಲುವು-ಸೋಲು ಕಂಡಿವೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಇನ್ನು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ. ಪಾಟೀಲ್ 89,958 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ 74,828 ಮತಗಳನ್ನು ಪಡೆಯುವ ಮೂಲಕ 15,130 ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ಅನಿಲ ಮೆಣಸಿನಕಾಯಿ ಆರಂಭಿಕ ಹಂತದಲ್ಲಿ ಅಲ್ಪ ಮುನ್ನಡೆ ಪಡೆದುಕೊಂಡರು ನಂತರ ಕಾಂಗ್ರೆಸ್ ಇಲ್ಲಿ ಸ್ಪಷ್ಟ ಮುನ್ನಡೆ ಪಡೆದುಕೊಂಡಿತು. ಹೆಚ್‌ಕೆ ಪಾಟೀಲ್ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಗೆಲುವಿನ ನಂತರ ಪ್ರತಿಕ್ರಿಯೆ ನೀಡಿರುವ ಹೆಚ್‌ಕೆ ಪಾಟೀಲ್ ತಮ್ಮನ್ನು ಗೆಲ್ಲಿಸಿದ್ದಕ್ಕೆ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ನರಗುಂದದಲ್ಲಿ ಬಿಜೆಪಿಗೆ ಗೆಲುವು
ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ 1791 ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಸಿ.ಸಿ. ಪಾಟೀಲ 72,835 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ 71,044 ಮತಗಳನ್ನು ಪಡೆದರು.
ಗೆಲುವಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಸಿ. ಪಾಟೀಲ, " ರಾಜ್ಯದಲ್ಲಿ ಕಾಂಗ್ರೆಸ್ ಪ್ರಭಾವವಿದ್ದರೂ ಜನ ನನ್ನನ್ನು ನಾಲ್ಕನೇ ಬಾರಿ ಶಾಸಕನನ್ನು ಮಾಡಿದ್ದಾರೆ. ನನ್ನ ಪರವಾಗಿ ಪ್ರಚಾರಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ,ನಟಿ ತಾರಾ ಅನುರಾಧಾ, ಶರಣ್ ಅವರಿಗೆ ಧನ್ಯವಾದಗಳು. ಜನತಾ ಜನಾರ್ಧನ ತೀರ್ಪಿಗೆ ತಲೆಬಾಗಿ ಜವಬ್ದಾರಿಯುತ ವಿರೋಧಪಕ್ಷವಾಗಿ ಕೆಲಸ ಮಾಡುತ್ತೇವೆ, ಶಿರಹಟ್ಟಿ ಮತಕ್ಷೇತ್ರ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಮೊದಲ ಬಾರಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿರು.
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಭರ್ಜರಿ ಗೆಲುವು ಪಡೆದಿದ್ದಾರೆ. ಬಿಜೆಪಿಯ ಹಾಲಿ ಶಾಸಕ ಅಭ್ಯರ್ಥಿ ಕಳಕಪ್ಪ ಬಂಡಿ 70,175 ಮತಗಳನ್ನು ಪಡೆದರು, ಕಾಂಗ್ರೆಸ್‌ನ ಜಿ.ಎಸ್. ಪಾಟೀಲ್ 94,865 ಮತಗಳನ್ನು ಪಡೆಯುವ ಮೂಲಕ 24,690 ಮತಗಳ ಅಂತರದಲ್ಲಿ ಗೆದ್ದು ಬೀಗಿದರು.
ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು, ಗದಗ ಜೆಟಿ ಇಂಜಿನಿಯರಿಂಗ್ ಕಾಲೇಜಿನ ಎದುರು ಪರಸ್ಪರ ಬಣ್ಣ ಎರಚಿಕೊಂಡು ಕುಣಿದು ಕುಪ್ಪಳಿಸಿದ ಕಾಂಗ್ರೆಸ್ಸಿಗರು ವಿಜಯೋತ್ಸವ ಆಚರಿಸಿದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರ
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಡಾ. ಚಂದ್ರು ಲಮಾಣಿಯವರನ್ನು ಗೆಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ವಿರುದ್ಧ 27,963 ಮತಗಳ ಅಂತರದಲ್ಲಿ ಚಂದ್ರು ಲಮಾಣಿ ಗೆಲುವು ಸಾಧಿಸಿದರು. ಚಂದ್ರು ಲಮಾಣಿ 73,600 ಮತಗಳನ್ನು ಪಡೆದರೆ, ರಾಮಕೃಷ್ಣ ದೊಡ್ಡಮನಿ 45,637 ಮತಗಳನ್ನು ಪಡೆದರು, ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ 34,550 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕಾಂಗ್ರೆಸ್‌ನ ಒಳಜಗಳ ಬಿಜೆಪಿಗೆ ಲಾಭ ಮಾಡಿಕೊಟ್ಟಿತು ಎನ್ನುವ ಮಾತುಗಳು ಕೇಳಿ ಬಂದಿವೆ. ಹಾಲಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಕೈಬಿಟ್ಟ ಬಿಜೆಪಿ ಡಾ. ಚಂದ್ರು ಲಮಾಣಿಗೆ ಟಿಕೆಟ್ ನೀಡಿತ್ತು. ಕೋವಿಡ್ ಸಂಕಷ್ಟ ಕಾಲದಲ್ಲಿ ಡಾ. ಚಂದ್ರು ಲಮಾಣಿ ಸಾಮಾಜಿಕ ಕಾರ್ಯಗಳ ಮೂಲಕ ಮುನ್ನಲೆಗೆ ಬಂದಿದ್ದರು.












Click it and Unblock the Notifications