Hi ಎಂದು ಮೆಸೇಜ್ ಕಳುಹಿಸಿ, ಕಳೆದು ಹೋದ ಮೊಬೈಲ್ ಮರಳಿ ಪಡೆಯಿರಿ!: ಗದಗ ಪೊಲೀಸರ ಹೊಸ ಪ್ರಯೋಗ
ಮೊಬೈಲ್ ಕಳೆದ ತಕ್ಷಣ ಯಾರು ಯಾವುದೇ ಪೊಲೀಸ್ ಠಾಣೆಗೆ ಹೋಗಬೇಕೆಂದೆನಿಲ್ಲ. ಕಳೆದುಹೋದ ಮೊಬೈಲ್‌ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಗದಗ ಪೊಲೀಸ್ ಇಲಾಖೆ ಮಾಡಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಗದಗ, ಫೆಬ್ರವರಿ 16: ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ. ಕಳೆದುಹೋದ ಮೊಬೈಲ್‌ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ನಮ್ಮ ಪೊಲೀಸ್ ಇಲಾಖೆ ಮಾಡಿದೆ ಎನ್ನುವ ಮಾಹಿತಿಯನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆಮಾತನಾಡಿದ ಬಿ.ಎಸ್ ನೇಮಗೌಡ , ಮೊಬೈಲ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು ಎಂಬ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಲಾಖೆಯು ಮೊಬೈಫೈ ಎಂಬ ಹೊಸದೊಂದು ಆ್ಯಪ್ ಸಿದ್ಧಪಡಿಸಿದ್ದು, ಈ ತಂತ್ರಾಂಶದ ಮೂಲಕ ಕಳೆದುಹೋದ ಮೊಬೈಲ್ ಅನ್ನು ಪತ್ತೆ ಮಾಡಬಹುದು ಎಂದಿದ್ದಾರೆ. ಆದರೆ, ಅದಕ್ಕೆ ಕೆಲವು ಪ್ರಕ್ರಿಯೆಗಳಿದ್ದು ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ ಎಂದಿದ್ದಾರೆ.
ಮೊಬೈಲ್ ಕಳೆದ ತಕ್ಷಣ ಯಾರು ಯಾವುದೇ ಪೊಲೀಸ್ ಠಾಣೆಗೆ ಹೋಗಬೇಕೆಂದೆನಿಲ್ಲ. ನೀವು ಇರುವ ಸ್ಥಳದಿಂದಲೇ ಕೆಲವು ಮಾಹಿತಿ ನೀಡಿದರೆ ಸಾಕು. ನಿಮ್ಮ ಮೊಬೈಲ್ ಮತ್ತೆ ನಿಮ್ಮ ಕೈ ಸೇರಬಹುದು ಎಂದು ತಕ್ಷಣ ಕೈಗೊಳ್ಳುವ ಕೆಲವು ಕ್ರಮಗಳನ್ನು ತಿಳಿಸಿದ್ದಾರೆ.

ಬೇರೆಯವರ ಅಥವಾ ಸಂಬಂಧಿಕರ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್‌ಗೆ Hi ಎಂದು ಮೆಸೇಜ್ ಕಳುಹಿಸಬೇಕು. ಮೆಸೇಜ್ ಪೊಲೀಸ್ ಇಲಾಖೆ ಸಿಬ್ಬಂದಿಗೆ ತಲುಪಿದ ತಕ್ಷಣ ಆ ಮೊಬೈಲ್ ವಾಟ್ಸಪ್‌ಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಆ ಲಿಂಕ್ ಓಪನ್ ಮಾಡಿ ತಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕು. ಆಗ ಭರ್ತಿಯಾದ ಮಾಹಿತಿ ಮೇರೆಗೆ ದೂರು ದಾಖಲಾಗುತ್ತದೆ.
ಈ ದೂರು ಪ್ರಕಾರ ಕಳೆದುಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಪ್ರಕ್ರಿಯೆ ಮೂಲಕ ಹುಡುಕಿಕೊಡಲಾಗುವುದು. ಒಂದು ವೇಳೆ ಪತ್ತೆಯಾಗದೇ ಇದ್ದಲ್ಲಿ ಆ ಮೊಬೈಲ್ ಅನ್ನೇ ಬ್ಲಾಕ್ ಮಾಡಲಾಗುತ್ತದೆ. ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಗದಗ ಪೊಲೀಸರಿಂದ ಹೊಸದೊಂದು ಪ್ರಯೋಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

"ಜಿಲ್ಲೆಯಲ್ಲಿ ಆಗಾಗ ಮೊಬೈಲ್ ಕಳೆದುಕೊಂಡ ಮತ್ತು ಕಳ್ಳತನವಾದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರ ನೀಡಬೇಕು ಅಂತೆನಿಲ್ಲ. ತಾವು ಇದ್ದ ಜಾಗದಿಂದಲೇ ಕೆಲವು ಕ್ರಮಗಳನ್ನು ಪಾಲಿಸಿದರೆ ಸಾಕು. ನಿಮ್ಮ ಮೊಬೈಲ್ ನಿಮ್ಮ ಕೈ ಸೇರುತ್ತದೆ. ಇದೊಂದು ಹೊಸ ಪ್ರಯತ್ನ. ಸದ್ಯ ಗದಗ ಜಿಲ್ಲೆಯಲ್ಲಿ ಮಾತ್ರ ಈ ವಿನೂತನ ಪ್ರಯೋಗವನ್ನು ನಡೆಸಲಾಗುತ್ತಿದೆ. ಇದರ ಕಾರ್ಯವಿಧಾನ ಮತ್ತು ಸಾಧಕ-ಭಾದಕಗಳ ಬಳಿಕ ಈ ಆ್ಯಪ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಹೇಳಿದ್ದಾರೆ.
ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ತಂತ್ರಾಂಶದ ಕ್ರಮ ಕೈಗೊಂಡ ಗದಗ ಪೊಲೀಸ್ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications