ಗದಗದಲ್ಲಿ ದೀಪಾವಳಿ ಆಚರಣೆ ಮಾಡಿದ ಮುಸ್ಲಿಂಮರು!

By: ನಮ್ಮ ಪ್ರತಿನಿಧಿ
Subscribe to Oneindia Kannada

ಗದಗ, ಅಕ್ಟೋಬರ್ 20 : ಸಾಮಾನ್ಯವಾಗಿ ದೀಪಾವಳಿ ಅಂದರೆ ಹಿಂದುಗಳ ಹಬ್ಬ ಅಂತ ಅಂದುಕೊಳ್ಳುತ್ತೇವೆ. ಆದರೆ, ಈ ಊರಿನಲ್ಲಿ ಮುಸ್ಲಿಂಮರು ಕೂಡ ದೀಪಾವಳಿ ಆಚರಿಸಿ ಸೌಹಾರ್ದತೆ ಮೆರೆಯುತ್ತಾರೆ. ತಮ್ಮ ಹೊಲದಲ್ಲಿ ಭೂತಾಯಿಗೆ ಪೂಜೆ ಸಲ್ಲಿಸಿ, ಖುರಾನ್ ಪಠಣ ಮಾಡ್ತಾರೆ. ನಾಡಿನ ರೈತರಿಗೆ ಸಂಪತ್ತು ನೀಡಿ, ಒಳಿತು ಮಾಡು ಎಂದು ಬೇಡಿಕೊಳ್ಳುತ್ತಾರೆ.

ನಾನಾ ಬಗೆಯ ಅಡುಗೆ ಮಾಡಿಕೊಂಡು ಹೊಲಕ್ಕೆ ಹೋಗುವ ಮುಸ್ಲಿಂ ಕುಟುಂಬದವರು. ತಮ್ಮ ಸಂಬಂಧಿಕರನ್ನು ಕರೆಸಿ ಹಿಗ್ಗಿನಿಂದ ದೀಪಾವಳಿ ಆಚರಣೆ ಮಾಡುತ್ತಾರೆ. ಇವರು ಆಚರಿಸುವ ಹಬ್ಬದಲ್ಲಿ ಪಟಾಕಿ ಸದ್ದು ಇರುವುದಿಲ್ಲ. ಬದಲಾಗಿ ಹಬ್ಬದ ನೆಪದಲ್ಲಿ ಸೌಹಾರ್ದತೆ ಪರಂಪರೆಯ ಅನಾವರಣ ನಡೆಯುತ್ತದೆ.

ಚಿತ್ರಗಳು : ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ದೀಪಾವಳಿ ಆಚರಣೆ

Gadag

ಇಂತಹ ಅಪರೂಪದ ದೃಶ್ಯ ಕಂಡುಬರುವುದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ. ದೀಪಾವಳಿ ಬಂದರೆ ಸಾಕು ಮುಂಡರಗಿ ತಾಲೂಕಿನ ಬಹುತೇಕ ಮುಸ್ಲಿಂಮರಿಗೂ ಹಿಗ್ಗು. ಹಬ್ಬದ ಮುಂಚಿತವಾಗಿಯೇ ತಮ್ಮ ಬಂಧು, ಬಳಗವನ್ನು ಉರಿಗೆ ಕರೆಸಿಕೊಳ್ಳುತ್ತಾರೆ. ಮನೆಮಂದಿಯಲ್ಲ ಹೋಗಿ ತಮ್ಮ ಜಮೀನಿನಲ್ಲಿ ದೀಪಾವಳಿ ಆಚರಿಸುತ್ತಾರೆ.

ಹಿಂದೂ ಸಂಪ್ರದಾಯದಂತೆ ಭೂತಾಯಿಗೆ ಪೂಜೆ ಸಲ್ಲಿಸಿ, ಕಾಯಿ ಒಡೆದು ಪೂಜೆ ಮಾಡುತ್ತಾರೆ. ನಂತರ ಮುಸ್ಲಿಂ ಸಂಪ್ರದಾಯದಂತೆ ಹೊಲದಲ್ಲಿ ಖುರಾನ್ ಪಠಣ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇನ್ನು ಈ ವೇಳೆ ಊಟಕ್ಕಾಗಿ ಮಾಡಿಕೊಂಡು ಬಂದ ಬಗೆಬಗೆಯ ಖಾದ್ಯಗಳನ್ನು ಭೂಮಾತೆಗೆ ಚರಗ ಚಲ್ಲಿಸೋ ಮೂಲಕ ವರ್ಷದ ಅನ್ನ ನೀಡುವ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

ಈ ಮುಸ್ಲಿಂ ಕುಟುಂಬದ ಆಚರಣೆ ಉತ್ತರ ಕರ್ನಾಟಕದ ಎಳ್ಳು ಅಮವಾಸೆ, ಸೀಗಿ ಹುಣ್ಣಿಮೆಯನ್ನು ನೆನಪಿಸುತ್ತದೆ. ಎಲ್ಲ ಜನಾಂಗದ ಆಚರಣೆಯನ್ನು ಎಲ್ಲರೂ ಕೂಡಿ ಆಚರಿಸಬೇಕು ಎನ್ನುವ ಕಾರಣಕ್ಕೆ ಕುಟುಂಬದ ಹಿರಿಯರು ನಡೆಸಿಕೊಂಡ ಬಂದ ಸಂಪ್ರದಾಯವನ್ನು ಇಂದಿನ ಪೀಳಿಗೆ ಸಹ ಪಾಲಿಸಿಕೊಂಡು ಬರುತ್ತಿದೆ.

ಜಾತಿಯನ್ನು ಮನುಷ್ಯರು ಮಾಡಿಕೊಂಡಿದ್ದು, ಆದರೆ ಭೂತಾಯಿಗೆ ಯಾವುದೇ ಜಾತಿ ಗೊತ್ತಿಲ್ಲ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರು ಭೂ ಮಾತೆಯ ಮಕ್ಕಳು. ಹೀಗಾಗಿ ದೀಪಾವಳಿ ಹಬ್ಬವನ್ನು ಎರಡು ಧರ್ಮದ ಸಂಪ್ರದಾಯದಂತೆ ಆಚರಿಸೋ ಮೂಲಕ ನಾವು ನಮ್ಮ ಹಿರಿಯ ಆಚರಣೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು.

ಹಬ್ಬಕ್ಕಾಗಿ ಎಳ್ಳು, ಶೇಂಗಾ, ನವಣೆ ಹೋಳಿಗೆ, ಹಪ್ಪಳ, ಸಂಡಿಗೆ, ಕರಿಗಡಬು ಹೀಗೆ ಬಗೆಬಗೆ ರುಚಿಕರ ಖಾದ್ಯ ತಯಾರಿಸುತ್ತಾರೆ. ಮನೆಮಂದಿಯಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಮುಂಡರಗಿ ತಾಲೂಕಿನಲ್ಲಿ ಮಾತ್ರ ಯಾವುದೇ ಜಾತಿ-ಮತದ ಹಂಗಿಲ್ಲದೇ ವಿಶಿಷ್ಠವಾಗಿ ದೀಪಾವಳಿ ಆಚರಿಸುವುದು ಇತರರಿಗೆ ಮಾದರಿಯಾಗಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Muslim families in Mundaragi taluk Gadag celebrate Deepavali the Hindu festival of lights.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ