ಏಕಾಏಕಿ ಲಾಟಿ ಪ್ರಹಾರ ನಡೆಸಿದ ಪೊಲೀಸರು: ಶರ್ಟ್ ಹರಿದು ಕಾಂಗ್ರೆಸ್ ಕಾರ್ಯಕರ್ತನ ಆಕ್ರೋಶ
ಗದಗ, ಮೇ 10: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರು ಲಾಟಿ ಪ್ರಹಾರ ನಡೆಸಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಸಂಜೀವ್ ರೆಡ್ಡಿ ಗೋವನ್ನರ್ ಎನ್ನುವವರ ಮೇಲೆ ಪೊಲೀಸರು ಲಾಟಿ ಪ್ರಹಾರ ನಡೆಸಿದ್ದಾರೆ. ಏಕಾಏಕಿ ಲಾಠಿ ಚಾರ್ಜ್ ಮಾಡಿದನ್ನು ಪ್ರಶ್ನಿಸಿದ ವ್ಯಕ್ತಿಗೆ ಪೊಲೀಸರು ಥಳಿಸಿರುವ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಂಜೀವ್ ರೆಡ್ಡಿ ಗೋವನ್ನರ್ ಪೊಲೀಸರನ್ನು ತಡೆದು ಲಾಠಿ ಚಾರ್ಜ್ ಮಾಡಿದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಏಕಾಏಕಿ ಸುತ್ತುವರಿದ ಪೊಲೀಸರು ಲಾಟಿ ಪ್ರಹಾರ ನಡೆಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತ ಪೊಲೀಸ್ ಕೊರಳ ಪಟ್ಟಿ ಹಿಡಿದು ಶರ್ಟ್ ಹರಿದು ಹಾಕಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮತದಾನಕ್ಕೆ ಬಂದ ಮಹಿಳೆಗೆ ಪೊಲೀಸರ ಲಾಠಿ ಏಟು
ಗದಗ: ಮತದಾನಕ್ಕೆ ಬಂದ ಮಹಿಳೆಗೆ ಪೊಲೀಸರು ಲಾಠಿ ಏಟು ನೀಡಿರುವ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಏಕಾಏಕಿ ಮತದಾನ ಸ್ಥಗಿತ ಮಾಡಿ ಚುನಾವಣಾ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಈ ವೇಳೆ ಸಿಪಿಐ ಸದಲಗಿ ಹಾಗೂ ಗ್ರಾಮಸ್ಥರು ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮತಗಟ್ಟೆಯಲ್ಲೇ ನೂಕಾಟ ತಳ್ಳಾಟ ನಡೆದಿದೆ. ಈ ವೇಳೆ ಹುಲಗೇಮ್ಮ ಎನ್ನುವ ಮಹಿಳೆಯ ಕೈಗೆ ಲಾಠಿಯಿಂದ ಹೊಡೆದಿರುವ ಆರೋಪ ಕೇಳಿ ಬಂದಿದ್ದು, ಲಾಠಿಯಿಂದ ಹೊಡೆದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ ಭೇಟಿ ಮಹಿಳೆಯಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮದ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.












Click it and Unblock the Notifications