ಜಲ ಜೀವನ್ ಮಿಷನ್ ಅನುಷ್ಠಾನ ರಾಜ್ಯಕ್ಕೆ ಗದಗ ನಂಬರ್ 1
ಗದಗ, ಜುಲೈ, 22: ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಗದಗ ಜಿಲ್ಲೆ ಕರ್ನಾಟಕದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಧಾರವಾಡ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಗದಗ ಜಿಲ್ಲೆಯ ಗ್ರಾಮಗಳಲ್ಲಿ ಜನರು ಅಪಾರ ಬೆಂಬಲ ನೀಡಿದ ಹಿನ್ನೆಲೆ ಯೋಜನೆಯ ಯಶಸ್ಸಿಗೆ ಕಾರಣವಾಗಿದೆ. ಗದಗ ಜಿಲ್ಲೆ ಯೋಜನೆಯ ಅನುಷ್ಠಾನದಲ್ಲಿ ಶೇಕಡಾ 97.84 ಇದ್ದರೆ, ಧಾರವಾಡ ಶೇಕಡಾ 95.37, ಮಂಡ್ಯ ಶೇಕಡಾ 77.55, ದಕ್ಷಿಣ ಕನ್ನಡ ಶೇಕಡಾ 75.86, ಕೊಪ್ಪಳ ಶೇಕಡಾ 75.66ರಷ್ಟು ಅಭಿವೃದ್ಧಿ ಕಂಡಿದೆ.
ಈ ಯೋಜನೆ ಬಗ್ಗೆ ಅಬ್ಬಿಗೇರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ್ ಮಾತನಾಡಿ, "ಕೆಲವು ಗ್ರಾಮಸ್ಥರು ಮೊದಲಿಗೆ ಜೆಜೆಎಂ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ವಿರೋಧ ವ್ಯಕ್ತಪಡಿಸಿದವರ ಮನವೊಲಿಸಲಾಯಿತು ಯೋಜನೆಯನ್ನು ಜಾರಿಗೆ ತರಲಾಯಿತು. ಈಗ ಗದಗದ ಬಹುತೇಕ ಗ್ರಾಮಗಳ ಮನೆಗಳು ನೀರಿನ ಸಂಪರ್ಕವನ್ನು ಹೊಂದಿವೆ. ವಾರಾಂತ್ಯದೊಳಗೆ ಕೆಲಸವನ್ನು ಪೂರ್ಣಗೊಳಿಸುತ್ತೇವೆ" ಎಂದು ಹೇಳಿದರು.

ಜೆಜೆಎಂ ಯೋಜನೆಯ ಬಗ್ಗೆ ಇಂಜಿನಿಯರ್ ಆನಂದ್ ಮಾತನಾಡಿ, "ಗ್ರಾಮಸ್ಥರು, ಗ್ರಾ.ಪಂ. ಸಿಬ್ಬಂದಿ, ಪಿಡಿಒಗಳು ಹಾಗೂ ಐಎಸ್‌ಎ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಈಗಾಗಲೇ ಕೆಲಸಗಳನ್ನು ಮುಕ್ತಾಯಗೊಳಿಸಿದ್ದೇವೆ. ಆದರೆ ಶಿರಹಟ್ಟಿ ತಾಲೂಕು ದೊಡ್ಡದಾಗಿರುವುದರಿಂದ ಇನ್ನು ಸಮಯ ಬೇಕಾಗುತ್ತದೆ. ಬೆಳಗಾವಿ, ಗದಗ, ಹುಬ್ಬಳ್ಳಿ-ಧಾರವಾಡ ಪ್ರದೇಶಗಳನ್ನು ಜಲಜೀವನ್ ಮಿಷನ್‌ಗೆ ಮೊದಲನೇ ಹಂತದಲ್ಲಿ ಆಯ್ಕೆ ಮಾಡಲಾಗಿದೆ" ಎಂದರು.
ಗ್ರಾಮೀಣ ಭಾಗಗಳಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಜನರು ಈಗಲೂ ಪರದಾಡುತ್ತಿದ್ದಾರೆ. ಇಂತಹ ಸಮಸ್ಯೆಯಿಂದ ಜನರಿಗೆ ಬಿಡುಗಡೆ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಶುದ್ಧ, ಸುರಕ್ಷಿತ ನೀರನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ರಾಜ್ಯದಲ್ಲೂ ಈಗಾಗಲೇ ಹಲವು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆಯನ್ನು ಈ ಯೋಜನೆಯಿಂದ ನೀಗಿಸಲಾಗಿದೆ. ರಾಜ್ಯದಲ್ಲಿ 97.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 34.78 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಗೃಹ ನಳ ಸಂಪರ್ಕದ ಮೂಲಕ ನೀರನ್ನು ಒದಗಿಸಲಾಗಿದೆ. ಯೋಜನೆಯ ಯಶಸ್ಸಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಎಷ್ಟೇ ಪ್ರಯತ್ನಿಸಿದರೂ ಅದರ ಜೊತೆಗೆ ಜನರ ಸಹಕಾರ ಕೂಡ ಅತೀ ಮುಖ್ಯವಾಗುತ್ತದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರ ಪಾತ್ರ ಅತ್ಯಂತ ಮುಖ್ಯವಾಗುತ್ತದೆ.

ಈ ಯೋಜನೆಯ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮೊದಲನೇ ಸ್ಥಾನದಲ್ಲಿದ್ದು, ಇನ್ನು ಹಲವು ಕಡೆ ಯೋಜನೆಯನ್ನು ವಿಸ್ತರಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.












Click it and Unblock the Notifications