ಗದಗ; ಶ್ರಾವಣ ಶನಿವಾರ ಹನುಮ ಮೂರ್ತಿ ಕಳ್ಳತನ
ಗದಗ, ಆಗಸ್ಟ್, 07: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಾಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನು ಕಿಡಿಗೇಡಿಗಳು ಶ್ರಾವಣ ಶನಿವಾರದಂದೇ ಕಳ್ಳತನ ಮಾಡಿದ್ದಾರೆ. ಶ್ರಾವಣ ಶನಿವಾರದ ಪೂಜೆಗೆ ಎಂದು ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯದಲ್ಲಿ ಆಂಜನೇಯ ಮೂರ್ತಿ ಕಳ್ಳತನ ಆಗಿರುವುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮಾರುತಿ ದೇವಸ್ಥಾನದ ಕಮಿಟಿ ಸದಸ್ಯರು ಸೇರಿ ಸಭೆ ಮಾಡಿದ್ದು, ಮೂರ್ತಿಯನ್ನು ವಾಪಾಸ್ ತಂದಿಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುತ್ತಲಿನ ಗ್ರಾಮದಿಂದ ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಗುಡಿಯಲ್ಲಿ ದೇವರ ಮೂರ್ತಿ ಇಲ್ಲದಿದ್ದನ್ನು ಕಂಡು ಗಾಬರಿಯಗಿದ್ದಾರೆ. ಅತ್ಯಂತ ಪುರಾತನವಾದ ಈ ದೇವಸ್ಥಾನ ಇತ್ತೀಚೆಗೆ ಬಹಳಷ್ಟು ಪ್ರಸಿದ್ಧಿ ಮತ್ತು ಭಕ್ತರ ಗಮನ ಸೆಳೆದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಆದ್ದರಿಂದ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದರು.

ಊರಿನ ಹೊರವಲಯದಲ್ಲಿರುವ ಈ ದೇವಸ್ಥಾನದಲ್ಲಿ ಸಣ್ಣ ಆಭರಣಗಳ ಕಳ್ಳತನ ಸಾಮಾನ್ಯವಾಗಿಬಿಟ್ಟಿತ್ತು. ಆದರೆ ಈ ಬಾರಿ ಖದೀಮರು ನಾಲ್ಕೈದು ಅಡಿ ಎತ್ತರದ ದೇವರ ಮೂರ್ತಿಯನ್ನೇ ಕದ್ದೊಯ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ ವಿಡಿಯೋ ಹರಿಬಿಟ್ಟ ಕಮಿಟಿ ಸದಸ್ಯರು, ಐತಿಹಾಸಿಕ ಮೂರ್ತಿ ಕಳ್ಳತನವಾಗಿದೆ. ಪೂಜೆಗೆ ಬಂದಿರುವ ಭಕ್ತರಿಗೆ ಸ್ವಾಮಿ ವಿಗ್ರಹ ಇಲ್ಲದಿದ್ದನ್ನು ಕಂಡು ಅತೀವ ನೋವಾಗಿದೆ. ವಿಗ್ರಹವನ್ನು ಯಾರು ತೆಗೆದುಕೊಂಡು ಹೋಗಿದ್ದೀರಾ ಅವರೇ ತಂದಿಡಬೇಕೆಂದು ಎಂದು ಎಚ್ಚರಿಸಿದ್ದಾರೆ.
ವಿಗ್ರಹವನ್ನು ತಂದಿಡದಿದ್ದರೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಅಲ್ಲಿನ ಸ್ಥಳೀಯರು ಎಚ್ಚರಿಕೆ ಸಂದೇಶ ರವಾನಿಸಿದರು. ಸೂರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ವರ್ಷದ ಹಿಂದೆ ಹನುಮನ ಕಲ್ಲು ರೂಪದಲ್ಲಿ ಉದ್ಭವಿಸಿದ್ದು, ಅದು ಇತ್ತೀಚೆಗೆ ಹನುಮನ ಮೂರ್ತಿ ರೂಪ ಪಡೆದಿತ್ತು.

ಇಷ್ಟಾರ್ಥ ಸಿದ್ಧಿಯಿಂದಾಗಿ ಹನುಮ ದೇವಾಲಯ ಸುತ್ತಲಿನ ಊರಿನವರಿಗೂ ಹೆಚ್ಚು ಪ್ರಸಿದ್ಧಿಯಾಗಿತ್ತು. ಸದ್ಯ ಮೂರ್ತಿ ಕಳ್ಳತನವಾಗಿರುವುದು ಭಕ್ತರಲ್ಲಿ ದಿಗ್ಭ್ರಮೆ ಉಂಟುಮಾಡಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಗ್ರಹ ನಾಪತ್ತೆಯಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಭಕ್ತರ ಭಾವನೆ ಜೊತೆ ಆಟ ಆಡುತ್ತಿರುವ ಕಿಡಿಗೇಡಿಗಳಿಗೆ ಮೂರ್ತಿಯನ್ನು ವಾಪಾಸ್ ತಂದಿಡುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದಾರೆ.












Click it and Unblock the Notifications