ಗದಗ; ಬೆಣ್ಣೆಹಳ್ಳದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಡಿಸಿ
ಗದಗ, ಆಗಸ್ಟ್ 06: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣೆಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನರಗುಂದ ತಾಲೂಕಿನ ಕುರ್ಲಗೇರಿ ಹಾಗೂ ರೋಣ ತಾಲೂಕಿನ ಯಾವಗಲ್ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನದಿ, ಹಳ್ಳಗಳು ತುಂಬಿ ಹರಿಯುವ ಸಮಯದಲ್ಲಿ ಜನ, ಜಾನುವಾರು ಜೀವಹಾನಿ ತಡೆಗಟ್ಟಲು ಲಭ್ಯವಿರುವ ಬೋಟ್‍ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು, ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ಪರಿಸ್ಥಿತಿ ಕುರಿತಂತೆ ನಿಗಾವಹಿಸಲು ಹಿರಿಯ ಅಧಿಕಾರಿಗಳಿಂದ ಹಿಡಿದು ರಕ್ಷಣಾ ತಂಡಗಳವರೆಗಿನ ಸಿಬ್ಬಂದಿಗಳು ಇರುವ ವಾಟ್ಸಪ್ ಗ್ರೂಪ್ ರಚನೆ ಮಾಡಿ ಕಾಲ ಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಿ ಪರಿಸ್ಥಿತಿ ನಿಭಾಯಿಸಬೇಕು ಎಂದು ನಿರ್ದೇಶನ ನೀಡಲಾಯಿತು.

ಪ್ರವಾಹ ಪರಿಸ್ಥಿತಿಯಿಂದಾಗಿ ಜನರನ್ನು ಸ್ಥಳಾಂತರ ಮಾಡಬೇಕಾಗಿ ಬಂದರೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಅಗತ್ಯದ ಔಷಧಿಗಳ ವ್ಯವಸ್ಥೆಗಳನ್ನು ಕೇಂದ್ರದಲ್ಲಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಯಿತು.
ಮಲಪ್ರಭಾ ನದಿ ಹಾಗೂ ಭದ್ರಾ ಜಲಾಶಯಗಳ ಒಳಹರಿವು ಮತ್ತು ಹೊರ ಹರಿವಿನ ಬಗ್ಗೆ ಅಧೀಕ್ಷಕ ಅಭಿಯಂತರರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ನೀರಿನ ಪ್ರಮಾಣ ತಿಳಿಸಲು ಅಗತ್ಯದ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅವಶ್ಯಕ ರಕ್ಷಣಾ ಸಲಕರಣೆಗಳಾದ ಲೈಫ್ ಜಾಕೆಟ್, ರೋಪ್, ಲ್ಯಾಡರ್, ಮುಂತಾದ ಸಲಕರಣೆಗಳನ್ನು ಸಂಬಂಧಿಸಿದ ಇಲಾಖೆಗಳು ಪರಿಸ್ಥಿತಿಗೆ ಅನುಗುಣವಾಗಿ ಸಂಗ್ರಹಿಸಿಟ್ಟುಕೊಳ್ಳಲು ನಿರ್ದೇಶನ ಕೊಟ್ಟರು.












Click it and Unblock the Notifications