ಗದಗ: ರೋಣ ಕ್ಷೇತ್ರದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ ಆಪ್
ಗದಗ, ಅಕ್ಟೋಬರ್ 12:2023 ರ ವಿಧಾನಸಭೆ ಚುನಾವಣೆಗೆ ಗದಗ ಜಿಲ್ಲೆ ರೋಣ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನಾತ್ಮಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಜೇಂದ್ರಗಡ ಪಟ್ಟಣದಲ್ಲಿ ಆಪ್ ಪಕ್ಷದ ಕಾರ್ಯಾಲಯ ಉದ್ಘಾಟನೆಯಲ್ಲಿ ತನ್ನ ಬಲಾಬಲ ತೋರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಸಮೀಪಿಸುತ್ತಿರುವಾಗಲೇ ಗದಗ ಜಿಲ್ಲೆಯಲ್ಲಿ ಈಗಿನಿಂದಲೇ ಚುನಾವಣಾ ಕಾವು ಏರತೊಡಗಿದೆ. ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಮ್ಆದ್ಮಿ ಪಕ್ಷದ ಪ್ರಚಾರದ ಅಬ್ಬರ ಜೋರಾಗಿತ್ತು. ರೋಣ ಕ್ಷೇತ್ರಕ್ಕೆ ಆಪ್ ಪಕ್ಷಕ್ಕೆ ಆನೇಕಲ್ ದೊಡ್ಡಯ್ಯ ಅಭ್ಯರ್ಥಿಯಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಟಕ್ಕರ್ ಕೊಡಲು ಗಜೇಂದ್ರಗಡ ಪಟ್ಟಣದಲ್ಲಿ ಬೃಹತ್ ರ್‍ಯಾಲಿ ನಡೆಸಿದ್ದಾರೆ.
ಪಟ್ಟಣದ ಜಿಟಿಡಿ ಕಲ್ಯಾಣ ಮಂಟಪದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ಕಾಲಕಾಲೇಶ್ವರ ವೃತ್ತದ ಮೂಲಕ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಆಪ್ ಕಾರ್ಯಾಲಯದವರೆಗೂ ಸಂಚರಿಸಿತು. ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಜನ ಮನ ಸೆಳೆಯಿತು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಪ್ ಕಾರ್ಯಾಲಯ ಉದ್ಘಾಟನೆ ವೇಳೆ ರೋಣ ಕ್ಷೇತ್ರದ ಬಹುತೇಕ ಗ್ರಾಮಗಳಿಂದ ಆಗಮಸಿದ ಆಮ್ ಆದ್ಮಿ ಕಾರ್ಯಕರ್ತರ ತೆಲೆಯ ಮೇಲೆ ಹಾಕಲಾದ ಆಪ್ ಟೋಪಿ ಗಮನ ಸೆಳೆಯಿತು.

ಜೀರೋ ಪರ್ಸೆಂಟ್ ಕಮಿಷನ್‌ನಲ್ಲಿ ಶೇ.100ರಷ್ಟು ಕೆಲಸ
ಎಎಪಿ ಪೃಥ್ವಿ ರೆಡ್ಡಿ ಮಾತನಾಡಿ, ಆಮ್ ಆದ್ಮಿಯಿಂದ ದೇಶಕ್ಕೆ ಅಭಿವೃದ್ಧಿ ಅಜೆಂಡಾ ಮಾಡಿದ್ದೇವೆ. ರಾಜ್ಯದಲ್ಲಿ ಜೆಸಿಬಿ(ಜೆಡಿಎಸ್,ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಬೇಸರ ಮೂಡಿಸಿವೆ. ಜನ ಪರ್ಯಾಯ ಬಯಸಿದ್ದಾರೆ. ಪರ್ಸೆಂಟೇಜ್ ಸರ್ಕಾರ ಬೇಕಿಲ್ಲ. ನಾವು ಜೀರೋ ಪರ್ಸೆಂಟ್ ಕಮಿಷನ್ ನಲ್ಲಿ ಶೇ. 100 ಕೆಲಸ ಮಾಡುತ್ತೇವೆ. 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಕೈಗೆ ಪೊರಕೆ ತೆಗೆದುಕೊಂಡು ರಾಷ್ಟ್ರೀಯ ಪಕ್ಷಗಳ ಗೂಡಿಸುವ ಕೆಲಸ ಮಾಡುತ್ತೇವೆ. ದೆಹಲಿ, ಪಂಜಾಬ್ ನಂತೆ ಕರ್ನಾಟಕದಲ್ಲೂ ಉಚಿತ ಶಿಕ್ಷಣ, ಆರೋಗ್ಯ, ರೈತರ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಬದಲಾವಣೆಗಾಗಿ ಜನರಿಗೆ ಎಎಪಿಗೆ ಬೆಂಬಲ
ಕೆಲವು ತಿಂಗಳ ಹಿಂದೆ ಗುಜರಾತ್‌ನಲ್ಲಿ ಪ್ರಚಾರ ಆರಂಭಿಸಿದ್ದ ವೇಳೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಇವೆ, ಬೇರೆ ಪಕ್ಷಗಳಿಗೆ ಅವಕಾಶವಿಲ್ಲ ಎಂದು ಅವರೆಡು ಪಕ್ಷದವರು ಹೇಳುತ್ತಿದ್ದರು. ಆದರೆ ಈಗ ಮೂರನೇ ಸ್ಥಾನದಿಂದ ಪ್ರಚಾರ ಆರಂಭಿಸಿದ ಎಎಪಿ ಇಂದು ಚುನಾವಣೆ ಗೆಲ್ಲುವ ಪಕ್ಷವಾಗಿ ನಿಂತಿದೆ. ಜನರಿಗೆ ಬದಲಾವಣೆ ಬೇಕಾಗಿದೆ, ಅಲ್ಲಿ ಈಗಾಗಲೆ ಕಾಂಗ್ರೆಸ್ -ಬಿಜೆಪಿಗೆ ಅವಕಾಶ ಕೊಟ್ಟಿದ್ದಾರೆ. ಹಿಂದೆ ಅವರಿಗೆ ಬೇರೆ ಆಯ್ಕೆಗಳಿರದ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿಗೆ ಅವಕಾಶ ನೀಡುತ್ತಿದ್ದರು, ಇದೀಗ ಡೆಲ್ಲಿ, ಪಂಜಾಬ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಹಳ್ಳಿ ಹಳ್ಳಿಗಳಿಗೆ ತಿಳಿದಿದೆ. ಹಾಗಾಗಿ ನಮಗೆ ಬೆಂಬಲ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್-ಬಿಜೆಪಿದು ಪ್ರಣಾಳಿಕೆ ರಾಜಕೀಯ
ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಮ್ಮ ಕೆಲಸಗಳನ್ನು ತೋರಿಸಿ ಮತಯಾಚನೆ ಮಾಡುವುದಕ್ಕೆ ಏನೂ ಇಲ್ಲ, ಅವರ ಅಭಿವೃದ್ದಿ ಕಾರ್ಯಗಳು ಕೇವಲ ಪ್ರಣಾಳಿಕೆಯಲ್ಲಿ ಮಾತ್ರ ಸೀಮಿತವಾಗಿವೆ. ಹಾಗಾಗಿ ಜಾತಿ, ಧರ್ಮದ ಬಗ್ಗೆ ಹೆಸರಲ್ಲಿ ಜನರನ್ನು ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಆದರೆ ಜನರಿಗೆ ಬೇಕಾಗಿರುವುದು ಒಳ್ಳೆಯ ಆಸ್ಪತ್ರೆ, ಶಿಕ್ಷಣ. ಜನರಿಗೆ ಬೇಕಾಗಿರುವುದು ಅದೇ, ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ ಮಾಡಬೇಕೆಂದು ಕೊಂಡಿರುತ್ತಾರೆ, ಕುಟುಂಬಸ್ಥರ ಆರೋಗ್ಯಕ್ಕಾಗಿ ಉತ್ತಮ ಆಸ್ಪತ್ರೆಗಳು ಅಗತ್ಯವಿದೆ. ಸರಕಾರಿ ಶಾಲೆಗಳಿಗೆ ಉತ್ತಮ ಶಿಕ್ಷಣ ಜೊತೆಗೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲೂ ಡೆಲ್ಲಿ-ಪಂಜಾಬ್ ಮಾದರಿ ಆಡಳಿತ
ಡೆಲ್ಲಿಯಲ್ಲಿ ಶೇ.99ರಷ್ಟು ಸರಕಾರಿ ಶಾಲೆ ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ,. ಇಲ್ಲಿ ಶೇ. 56ರಷ್ಟು ಮಕ್ಕಳು ಮಾತ್ರ ಉತ್ತೀರ್ಣರಾಗುತ್ತಿದ್ದಾರೆ. ಉಳಿದ ಮಕ್ಕಳ ಭವಿಷ್ಯ ಅಂತ್ಯವಾಗುತ್ತಿದೆ. ನಾವು ಬೇರೆ ಪಕ್ಷಗಳಂತೆ ಜನರ ತೆರಿಗೆ ದುಡ್ಡನ್ನು ತಿನ್ನಲ್ಲ, ಶೇ.100ರಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತೇವೆ. ಇದರಿಂದ ಜನರ ಜೀವ ಸುಧಾರಣೆಯಾಗುತ್ತದೆ, ನಾವು ಇದನ್ನು ಡೆಲ್ಲಿ- ಪಂಜಾಬ್ ಈಗಾಗಲೆ ಮಾಡಿದ್ದೇವೆ, ಇಲ್ಲೂ ಮಾಡಲಿದ್ದೇವೆ ಎಂದರು.












Click it and Unblock the Notifications