ಗದಗ; ನಿರಂತರ ಮಳೆಗೆ ಬೆಳೆ ನಷ್ಟ, ಸಂಕಷ್ಟದಲ್ಲಿ ಅನ್ನದಾತ
ಗದಗ, ಆಗಸ್ಟ್, 02: ಗದಗ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಧಾರಾಕಾರವಾಗಿ ಸುರಿಯುವ ಮಳೆಯಿಂದಾಗಿ ಬೆಳೆಗಳೆಲ್ಲ ಸಂಪೂರ್ಣವಾಗಿ ನೆಲಕಚ್ಚಿದ ಕಾರಣ ರೈತರು ನಲುಗಿ ಹೋಗಿದ್ದಾರೆ.
ಗದಗ ಜಿಲ್ಲೆಯ ರೋಣ, ನರಗುಂದ, ಗಜೇಂದ್ರಗಡ ತಾಲೂಕಿನ ಬಹುತೇಕ ಕಡೆ ಬೆಳೆಗಳು ಜಲಾವೃತವಾಗಿವೆ. ಇನ್ನು ಹೆಸರು ಬೆಳೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಂಪೂರ್ಣವಾಗಿ ಅವನತಿಯ ಹಂತಕ್ಕೆ ತಲುಪಿವೆ.
ಹುಯಿಲಗೋಳ ಗ್ರಾಮದಲ್ಲಿ ಹಳ್ಳ ಪ್ರವಾಹ ಬಂದು ಜಮೀನುಗಳಲ್ಲಿ ನೀರು ನಿಂತು ಬೆಳೆದು ನಿಂತಿದ್ದ ಬೆಳೆಗಳು ನಾಶ ಆಗಿವೆ. ಅಧಿಕಾರಿಗಳು ಹಳ್ಳದ ಹೂಳೆತ್ತದ ಕಾರಣ ಹೀಗೆ ಆಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಟಗೇರಿ ಭಾಗದಲ್ಲಿ ಹಳ್ಳದಲ್ಲಿ ಪ್ರವಾಹ ಬಂದಿದ್ದು, ಕಸ, ಕಡ್ಡಿಗಳು ತುಂಬಿ ನೀರು ಸರಾಗವಾಗಿ ಹರಿದು ಹೋಗದೆ ಪಕ್ಕದ ಜಮೀನುಗಳಿಗೆ ನುಗ್ಗಿದೆ. ಪರಿಣಾಮ ಹಳ್ಳ ತುಂಬಿ ಹುಯಿಲಗೋಳ, ಕಿರಟಗೆರೆ ಗ್ರಾಮದ ಪ್ರದೇಶದಲ್ಲಿ ಕೆಲ ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಹಳ್ಳದ ನೀರು ಉಕ್ಕಿ ಹರಿದು ನೂರಾರು ಎಕರೆ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದೆ. ಹೀಗಾಗಿ ಅಲ್ಲಿನ ರೈತರು ಪ್ರತಿಭಟನೆ ಮಾಡಿ ಹಳ್ಳದ ಊಳೆತ್ತುವಂತೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಇನ್ನು ಗದಗ ತಾಲೂಕಿನ ಮಲ್ಲಸಮುದ್ರದಲ್ಲಿಯೂ ಹೆಸರು ಬೆಳೆ ಹಾಳಾಗಿ ರೈತರು ಗೋಳಾಡಿದ್ದಾರೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ. ಇದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಬೆಳೆಗಳು ಜಲಾವೃತವಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅವರು ಕೊನೆಗೆ ಯಾವುದೇ ದಾರಿ ಇಲ್ಲದೆ ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇಲ್ಲಿನ ರೈತರ ಪಾಡು ದಿನದಿಂದ ದಿನಕ್ಕೆ ನೀರಲ್ಲಿ ಮುಳುಗುತ್ತಲೇ ಇದೆ. ಈಗಲೂ ಸಹ ಮಳೆ ನಿರಂತರವಾಗಿ ಸುರಿಯುತ್ತಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.

ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೀಜ, ಗೊಬ್ಬರವನ್ನು ಹಾಕಿ ಬೆಳೆಗಳನ್ನು ಬೆಳೆದ ಅನ್ನದಾತನ ಪಾಡು ಹೇಳತೀರದಾಗಿದೆ. ಮಳೆರಾಯ ರೈತರ ಭೂಮಿಗಳನ್ನು ಆವರಿಸುತ್ತಲೇ ಇದ್ದಾನೆ. ಕೃಷಿಯನ್ನೇ ನಂಬಿಕೊಂಡು ಇದ್ದ ರೈತರಿಗೆ ಮಳೆರಾಯ ಅಡ್ಡಿಯಾಗಿ ಬಿಟ್ಟು ಬಿಡದಂತೆ ಕಾಡುತ್ತಿದ್ದು, ರೈತರನ್ನು ನಷ್ಟದ ಸಂಕೋಲೆಯತ್ತ ದೂಡಿದೆ.












Click it and Unblock the Notifications