ಗಣೇಶನ ಜೊತೆ 101 ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ ಗದಗ APMC ಸಿಬ್ಬಂದಿ
ಗದಗ, ಸೆಪ್ಟೆಂಬರ್, 22: ರಾಜ್ಯದಲ್ಲಿ ಸದ್ಯ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜೊತೆಗೆ ರೈತರನ್ನು ಅವಲಂಬಿಸಿರುವ ಎಪಿಎಂಸಿ ವ್ಯಾಪಾರಸ್ಥರೂ ಸಹ ಕಂಗಾಲಾಗಿದ್ದಾರೆ. ಎಪಿಎಂಸಿಗೆ ರೈತರ ಉತ್ಪನ್ನಗಳು, ಕಾಳುಗಳು ಬರದೇ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಮತ್ತೊಂದೆಡೆ ಮಳೆಗಾಗಿ ರೈತರು ದೇವರುಗಳ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಗದಗದಲ್ಲಿ ನೂರಾರು ಗೋವುಗಳಿಗೆ ಪೂಜೆ ಸಲ್ಲಿಸಿದ ಘಟನೆಯೂ ನಡೆದಿದೆ.
ಗದಗ ನಗರದ ಎಪಿಎಂಸಿ ವ್ಯಾಪಾರಸ್ಥರು ಪ್ರತಿಷ್ಠಾಪನೆ ಮಾಡಿರುವ ಗಣೇಶನ ಸಮ್ಮುಖದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬರಗಾಲ ನೀಗಿಸಿ ಸಮೃದ್ಧಿ ಕೊಡು ಅಂತಾ ಪ್ರಾರ್ಥಿಸಿ, ವಿನಾಯಕನ ಜೊತೆಗೆ ಗೋ ಮಾತೆಗೂ ಪೂಜೆ ಸಲ್ಲಿಸಿದರು. ಮುತ್ತೈದೆಯರು 101 ಗೋವು, ಎತ್ತುಗಳಿಗೆ ಅರಿಸಿಣ ಕುಂಕುಮ ಹಚ್ಚಿ ಪೂಜಿಸಿದರು. ಅಲ್ಲದೆ ಅಕ್ಕಿ, ಬೆಲ್ಲ ಅರ್ಪಿಸಿ ಭಕ್ತಿಯಿಂದ ಮಳೆಯಾಗಲಿ ಎಂದು ಬೇಡಿಕೊಂಡು.

ಹೀಗೆ ಪೂಜೆ ಮಾಡುವುದರಿಂದ ಗೋಮಾತೆ ಸಂತೃಪ್ತಳಾಗ್ತಾಳೆ. ಇದರಿಂದ ರೈತರು ಸಮೃದ್ಧರಾಗ್ತಾರೆ ಅನ್ನೋದು ನಂಬಿಕೆಯಿದೆ. ಹೀಗಾಗಿ ಈ ಬಾರಿ ವಿನಾಯಕನ ಜೊತೆಗೆ ಗೋವುಗಳ ಪೂಜೆಯನ್ನೂ ನೆರವೇರಿಸಲಾಗಿದೆ. ಎಪಿಎಂಸಿ ವರ್ತಕರ ಸಂಘ ಕಳೆದ ಎರಡು ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದೆ. ಒಂಭತ್ತು ದಿನಗಳ ಕಾಲ ನಡೆಯುವ ಗಣೇಶ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.
ಪ್ರತಿ ಬಾರಿಯೂ ಉಡಿ ತುಂಬುವ ಕಾರ್ಯ, ಅನ್ನಸಂತರ್ಪಣೆ ಮಾಡುತ್ತಿದ್ದ ವರ್ತಕರು, ಈ ಬಾರಿ ಬರ ಎದುರಾಗಿರುವುದರಿಂದ ವಿಶೇಷ ಗೋ ಪೂಜೆ ಮಾಡಿ ಗಮನ ಸೆಳೆದಿದ್ದಾರೆ. ಗದಗ ಜಿಲ್ಲೆಯಲ್ಲಿ ಬರದ ಛಾಯೆ ದಟ್ಟವಾಗಿದ್ದು, ಬರಗಾಲ ದೂರವಾಗಿ ಮಳೆಯಾಗಲಿ ಅಂತಾ ಕೇಳಿಕೊಂಡಿದ್ದಾರೆ. ವಿಶೇಷ ಅಂದರೆ ಪರಿಸರ ಸ್ನೇಹಿ ಗಣಪನನ್ನೇ ಈ ಬಾರಿ ಪ್ರತಿಷ್ಠಾಪಿಸಿರುವ ಮಂಡಳಿ, ಪರಿಸರ ಪ್ರೇಮ ಮೆರೆದಿದ್ದಾರೆ. ರೈತರು ಸಮೃದ್ಧರಾದರೆ ಎಪಿಎಂಸಿ ವ್ಯಾಪಾರವಾಗುತ್ತದೆ. ಹೀಗಾಗಿ ರೈತರ ಸಂಕಷ್ಟ ನೀಗಲಿ ಅಂತಾ ಕೇಳಿಕೊಳ್ಳಲಾಗಿದೆ.












Click it and Unblock the Notifications