ಜನಿವಾರ ತೆಗಿತೀನಿ ಅಂದರೂ "ಅದಕ್ಕೆ ಸಮಯವಿಲ್ಲ" ಎಂದು ಕತ್ತರಿಸಿದರು: ವಿದ್ಯಾರ್ಥಿ ನಂದನ್!
ಕರ್ನಾಟಕದಲ್ಲಿ ಜನಿವಾರ ವಿವಾದವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಶಿವಮೊಗ್ಗ ಹಾಗೂ ಬೀದರ್‌ನ ನಂತರ ಇದೀಗ ಧಾರವಾಡದಲ್ಲೂ ಜನಿವಾರವನ್ನು ಬಿಚ್ಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಿಇಟಿ ಪರೀಕ್ಷೆಯನ್ನು ಬರೆಯುವ ಸಂದರ್ಭದಲ್ಲಿ ಆಗಿರುವ ಎಡವಟ್ಟು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಧಾರವಾಡದಲ್ಲಿಯೂ ಜನಿವಾರಕ್ಕೆ ಕತ್ತರಿ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಸಿಬ್ಬಂದಿ ಹಾಗೂ ಪೊಲೀಸರು ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆ ಬರೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಧಾರವಾಡ ನಗರದ ಹುರಕಡ್ಲಿ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು. ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ನಂದನ್ ಏರಿ ಎಂಬ ವಿದ್ಯಾರ್ಥಿಯ ಜನಿವಾರ ಕಟ್ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಜನಿವಾರ ಕತ್ತರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನಗರದ ಜೆಎಸ್‌ಎಸ್ ಕಾಲೇಜ್ ವಿದ್ಯಾರ್ಥಿ ನಂದನ್ ಇದರಿಂದ ಆಘಾತಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಯ ಜನಿವಾರ ಗಮನಿಸಿದ್ದ ಸಿಬ್ಬಂದಿ
ಜನಿವಾರ ಹಾಕಿಕೊಂಡು ಹೋಗದಂತೆ ತಡೆದಿದ್ದಾರೆ. ತೆಗೆದು ಬ್ಯಾಗಿನೊಳಗೆ ಇಟ್ಟುಕೊಳ್ಳವೆನೆಂದರೂ ಬಿಡದ ಸಿಬ್ಬಂದಿ ಹಾಗೂ ಪೊಲೀಸರು ಅದಕ್ಕೆ ಸಮಯವಿಲ್ಲ ಎಂದು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಜನಿವಾರವನ್ನು ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಅದನ್ನು ಹಾಗೆಯೇ ಬ್ಯಾಗ್ ನಲ್ಲಿಟ್ಟುಕೊಂಡ ನಂದನ್ ಪರೀಕ್ಷೆ ಬರೆದಿದ್ದಾರೆ.
ಘಟನೆಯಿಂದ ಶಾಕ್‌ಗೆ ಒಳಗಾಗಿರೋ ನಂದನ್ ಎರಡು ದಿನಗಳ ಬಳಿಕ ಹೊಸ ಜನಿವಾರ ಧಾರಣೆ ಮಾಡಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಬೀದರ್, ಶಿವಮೊಗ್ಗ ಘಟನೆ ವರದಿ ಬಂದ ಮೇಲೆ ಈ ವಿಷಯವನ್ನು ತಂದೆಗೆ ನಂದನ್ ತಿಳಿಸಿದ್ದಾರೆ. ಇನ್ನೂ ಅದೇ ಶಾಕ್‌ನಲ್ಲಿ ವಿದ್ಯಾರ್ಥಿ ಇದ್ದಾರೆ. ಈ ಬೆಳವಣಿಗೆಗೆ ವಿದ್ಯಾರ್ಥಿಯ ತಂದೆ ವಿವೇಕ ಏರಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗೆ ಧೈರ್ಯ ತುಂಬಿದ ಬ್ರಾಹ್ಮಣ ಸಮಾಜದ ಪ್ರಮುಖರು
ಇನ್ನು ಘಟನೆಯ ಬಗ್ಗೆ ಬ್ರಾಹ್ಮಣ ಸಮಾಜದಿಂದಲೂ ವಿರೋಧ ವ್ಯಕ್ತವಾಗಿದೆ. ವಿದ್ಯಾರ್ಥಿಗೆ ಬ್ರಾಹ್ಮಣ ಸಮಾಜದ ಮುಖಂಡರು ಧೈರ್ಯ ತುಂಬಿದ್ದಾರೆ.
ಸೋಮವಾರ ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡುವುದಕ್ಕೆ ನಿರ್ಧಾರಿಸಲಾಗಿದೆ. ಇನ್ನು ಈ ವಿದ್ಯಾರ್ಥಿಯ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭೇಟಿ ನೀಡಿದ್ದಾರೆ.
ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಜನಿವಾರ ಕತ್ತರಿಸಿದ ಪ್ರಕರಣದಂತೆಯೇ ವಿದ್ಯಾಕಾಶಿ ಧಾರವಾಡದಲ್ಲೂ ಜನಿವಾರಕ್ಕೆ ಕತ್ತರಿ ಹಾಕಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಹುರಕಡ್ಲಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲೆಂದು ಜೆಎಸ್‌ಎಸ್ ಕಾಲೇಜಿನ ನಂದನ್ ಏರಿ ಎಂಬ ವಿದ್ಯಾರ್ಥಿ ಬಂದಿದ್ದ. ಈತನ ಕೊರಳಲ್ಲಿದ್ದ ಜನಿವಾರ ಗಮನಿಸಿದ್ದ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟು ನಂತರ ಆತನನ್ನು ಪರೀಕ್ಷಾ ಕೇಂದ್ರದ ಒಳಗಡೆ ಬಿಟ್ಟಿದ್ದಾರೆ.
ವಿದ್ಯಾರ್ಥಿ ತಾನು ಜನಿವಾರ ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ವಿನಂತಿಸಿದರೂ ಕೇಳದ ಸಿಬ್ಬಂದಿ, ಆ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿ ನಂದನ್ ಆಘಾತಕ್ಕೆ ಒಳಗಾಗಿದ್ದಾನೆ. ಕತ್ತರಿಸಿದ ಜನಿವಾರನ್ನು ವಿದ್ಯಾರ್ಥಿ ತನ್ನ ಬ್ಯಾಗ್‌ನಲ್ಲೇ ಇಟ್ಟುಕೊಂಡಿದ್ದ. ಎರಡು ದಿನದ ಬಳಿಕ ಆತನಿಗೆ ಮನೆಯವರು ಹೊಸ ಜನಿವಾರ ಹಾಕಿದ್ದಾರೆ. ಬೀದರ್, ಶಿವಮೊಗ್ಗದಲ್ಲಿ ನಡೆದ ಜನಿವಾರ ಗಲಾಟೆಯನ್ನು ನೋಡಿ ಕೊನೆಗೆ ನಂದನ್ ತನಗೂ ಆದ ಪರಿಸ್ಥಿತಿ ಬಗ್ಗೆ ತನ್ನ ತಂದೆಯ ಮುಂದೆ ಹೇಳಿದ್ದಾನೆ. ಅಲ್ಲಿಯವರೆಗೂ ಈ ಬಗ್ಗೆ ನಂದನ್ ಮನೆಯಲ್ಲಿ ಘಟನೆ ಕುರಿತು ಹೇಳಿರಲಿಲ್ಲ.
ಘಟನೆ ಕುರಿತು ವಿದ್ಯಾರ್ಥಿ ನಂದನ್ ತಂದೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಕತ್ತರಿಸಿದ್ದಕ್ಕೆ ಆಘಾತಕ್ಕೆ ಒಳಗಾದ ತನ್ನ ಮಗನಿಗೆ ಸರಿಯಾಗಿ ಪರೀಕ್ಷೆ ಕೂಡ ಬರೆಯಲು ಆಗಿಲ್ಲ ಎಂದು ವಿದ್ಯಾರ್ಥಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ, ಬೀದರ್‌ನಂತೆಯೇ ಧಾರವಾಡದಲ್ಲೂ ಜನಿವಾರಕ್ಕೆ ಕತ್ತರಿ ಹಾಕಿದ ವಿಷಯ ಇದೀಗ ಸದ್ದು ಮಾಡಿದೆ.
ಧಾರವಾಡದಲ್ಲಿ ಜನಿವಾರಕ್ಕೆ ಕತ್ತರಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಿವಾಸಕ್ಕೆ ಪ್ರಮೋದ್ ಮುತಾಲಿಕ್, ಗಂಗಾಧರ ಕುಲಕರ್ಣಿ ಭೇಟಿ ನೀಡಿ ಪ್ರಕರಣ ಖಂಡಿಸಿದರು. ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶ್ರೀ ರಾಮಸೇನೆ ರಾಜ್ಯಾದ್ಯಕ್ಷ ಗಂಗಾಧರ ಕುಲಕರ್ಣಿ ಅವರು ವಿದ್ಯಾರ್ಥಿ ಹಾಗೂ ಫೋಷಕರಿಗೆ ಧೈರ್ಯ ತುಂಬಿದ್ದಾರೆ.
ಸಚಿವ ಸಂತೋಷ ಲಾಡ್ ಹೇಳಿದ್ದೇನು ?
ಧಾರವಾಡದಲ್ಲಿ ಜನಿವಾರ ತಗೆಸಿದ ಪ್ರಕರಣದ ಬಗ್ಗೆ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿದ್ದಾರೆ. ಸರ್ಕಾರಿ ನೌಕರರು ಇದ್ದರೆ ಚೆಕ್ ಮಾಡ್ತೇವೆ. ಖಾಸಗಿ ಸಂಸ್ಥೆ ಅವರಾಗಿದ್ದರೆ, ಅವರ ಮನಸ್ಥಿತಿ ಸರಿ ಇರಲ್ಲ. ಖಾಸಗಿ ಸಂಸ್ಥೆಯಲ್ಲಿ ಮಾಡಿದ್ದರೆ ಏನು ಮಾಡೋಕೆ ಆಗುತ್ತೆ ಅಂತ ಪ್ರಶ್ನೆ ಮಾಡಿದ್ದಾರೆ.
ಸಂಸ್ಥೆಗೆ ಮೊದಲು ನೋಟಿಸ್ ನೀಡಬೇಕು. ಸಂಸ್ಥೆ ನಡೆಸೋರಿಗೆ ನೋಟಿಸ್ ನೀಡಬೇಕು. ಲಿಖಿತ ರೂಪದಲ್ಲಿ ದೂರು ಕೊಟ್ಟರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಹುಲ್ ಗಾಂಧಿ ಮಾತು ಕೇಳಿದರೆ, ಸಿದ್ದರಾಮಯ್ಯ ನೆಗದು ಬಿದ್ದು ಹೋಗ್ತಾರೆ ಅನ್ನೋ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರ.
ಆ ರೀತಿ ಮಾತನಾಡುವುದು ಅದು ಅವರ ಬಾಯಿಗೆ ಸರಿ ಅನಿಸುತ್ತೆ. ಈ ದೇಶ ನೆಗದು ಬಿದ್ದು ಹೋಗಿದೆಯಲ್ಲಾ ಅದಕ್ಕೇನು ಹೇಳ್ತಾರೆ. ಅವರ ಆಶೀರ್ವಾದದಿಂದ ಎರಡು ಬಾರಿ ಸಿಎಂ ಆಗಿದ್ದಾರೆ. ರಾಹುಲ್ ಗಾಂಧಿ ಭಸ್ಮಾಸುರವಾದ್ರೆ, ಮೋದಿ ಅವರು ಏನಂತೆ ?
ಹನ್ನೊಂದು ವರ್ಷ ಅಧಿಕಾರದಲ್ಲಿದ್ದಾರಲ್ಲಾ ಏನು ಮಾಡಿದ್ದಾರೆ. ಅವರಿಗೆ ಅನಕೂಲವಾಗೋ ವಿಷಯಗಳ ಬಗ್ಗೆ ಮಾತ್ರ ಬಿಜೆಪಿ ನಾಯಕರು ಮಾತಾಡ್ತಾರೆ. ಬಿಜೆಪಿ ಇರುವ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಜೋತಿಬಾ ಫುಲೆ ಚಿತ್ರ ಬಿಡುಗಡೆಗೆ ಯಾಕೆ ವಿರೋಧ ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡಿರುವ ಅವರು, ಭಾರತ ಕೇವಲ ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಹೋಲಿಕೆ ಮಾಡಿಕೊಂಡಿದ್ದರೆ, ಸಾಲದು ಅಂತಲೂ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ಇನ್ನು ರಾಜ್ಯದಲ್ಲಿ ಜನಿವಾರವನ್ನು ತೆಗೆಸುತ್ತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಸಮಾಜದಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ. ಹೀಗಾಗಿ, ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.












Click it and Unblock the Notifications