ರಾಜ್ಯದಲ್ಲಿ ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಪ್ರಬಲ ಆಕಾಂಕ್ಷಿ
ಧಾರವಾಡ, ನವೆಂಬರ್ 30: ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ತಮ್ಮ ಆಡಳಿತವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಉಪಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಒಂದಿಷ್ಟು ಬದಲಾವಣೆಯಾಗಲಿದೆ.
ಸದ್ಯ ಸಂಪುಟ ವಿಸ್ತರಣೆ ಸುದ್ದಿಯಲ್ಲಿದ್ದು, ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಈಗಾಗಲೇ ಮಂತ್ರಿ ಸ್ಥಾನ ಪಡೆದು ಕಳೆದುಕೊಂಡ ಮಾಜಿ ಸಚಿವರು ಒಂಡೆದೆಯಾದರೆ, ಶಾಸಕರು ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದೀಗ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹ ಈ ಬಾರಿ ತಾನು ಸಚಿವ ಸ್ಥಾನ ಆಕಾಂಕ್ಷಿ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ಇನ್ನು 15 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದ್ದು, ಈ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಸಚಿವ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ ಮತ್ತು ಲಕ್ಷ್ಮಣ್ ಸವದಿ ಅವರ ವಿಚಾರದಲ್ಲಿ ಹೈಕಮಾಂಡ ತೀರ್ಮಾನ ಮಾಡಲಿದೆ. ಆದರೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ವಿನಯ್ ಕುಲಕರ್ಣಿ ಹೇಳಿದರು.

ಇನ್ನು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಚರ್ಚಿಸಲು ಸಭಾಪತಿಗಳ ಬಳಿ ಸಮಯ ಕೇಳಿದ್ದೇವೆ. ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಕೂಡ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಸ್ವಾಮೀಜಿ ನ್ಯಾಯ ಸಿಗುವರೆಗೂ ಹೋರಾಟ ಮಾಡುತ್ತಾರೆ. ನಮ್ಮ ಸರ್ಕಾರ ಇದ್ದರು ನಾವು ಬೇಡ ಎಂದು ಹೇಳಲು ಆಗಲ್ಲ. ಅವರು ಇಡೀ ಪಂಚಮಸಾಲಿ ಸಮುದಾಯಕ್ಕೆ 2ಎ ಕೇಳುತ್ತಿದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂಬುದು ನಮ್ಮ ಒತ್ತಾಯ ಇದೆ ಎಂದರು.
ಇದೇ ವೇಳೆ ಕೆಲ ಶಾಸಕರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಹೋರಾಟದಿಂದ ದೂರ ಮಾಡಿದ್ದಾರೆ ಎಂಬ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ವಿನಯ್ ಕುಲಕರ್ಣಿ, ನಾನು ಮಾತ್ರ ಹೋರಾಟಕ್ಕೆ ಹೋಗುವೆ. ನಾನು ಹುಟ್ಟು ಹೋರಾಟಗಾರನಿದ್ದೇನೆ. ಕೆಲವರು ಮಂತ್ರಿ ಆಸೆಯಿಂದ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಹೋರಾಟಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಪಂಚಮಸಾಲಿ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
ಇನ್ನೂ ಇದೇ ವೇಳೆ ಕೆಪಿಸಿಸಿ ಅದ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ಮೂವರು ಆಕಾಂಕ್ಷೆಗಳು ಇದ್ದಾರೆ ಎನ್ನುವುದು ಮಾಧ್ಯಮದ ಚರ್ಚೆಯಷ್ಟೇ. ಡಿ.ಕೆ ಶಿವಕುಮಾರ್ ಅವರು ಸಚಿವರಾಗಿರುವ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಅಧ್ಯಕ್ಷರ ಬದಲಾವಣೆಯಾಗುತ್ತಿದೆ. ನಾವು ಹೇಳಿದವರು ಅಧ್ಯಕ್ಷರಾಗಲ್ಲ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.












Click it and Unblock the Notifications