ಫಲಾನುಭವಿ ಪತ್ತೆಗೆ ಗ್ರಾಮ ಲೆಕ್ಕಾಧಿಕಾರಿಯ ವಿಶಿಷ್ಟ ಪ್ರಯತ್ನ
ಧಾರವಾಡ, ಮಾರ್ಚ್ 25; ಸರ್ಕಾರದಿಂದ ಸಿಗುವ ವಿವಿಧ ಪಿಂಚಣಿ ಹಾಗೂ ಸೌಲಭ್ಯಗಳ ದುರುಪಯೋಗ ತಡೆಯಲು ಮತ್ತು ಪಿಂಚಣಿ ಪಡೆಯುತ್ತಿರುವ ಪಲಾನುಭವಿಗಳಿಗೆ ಮಧ್ಯವರ್ತಿಗಳ ತೊಂದರೆ ಇಲ್ಲದಂತೆ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಫಲಾನುಭವಿಗಳ ಖಾತೆಗೆ ನೇರವಾಗಿ ಪಿಂಚಣಿ ಜಮೆ ಮಾಡುವುದಕ್ಕಾಗಿ ಆಧಾರ್ ಜೋಡಣೆ ಮಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಧಾರವಾಡ ತಹಶೀಲ್ದಾರ್ ಡಾ. ಸಂತೋಷ ಬಿರಾದಾರ ಅವರು ಪ್ರತಿದಿನ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ.
ಧಾರವಾಡ ನಗರದ ಸಪ್ತಾಪೂರ ಹಾಗೂ ಅತ್ತಿಕೊಳ್ಳ ಪ್ರದೇಶದ ಗ್ರಾಮಲೆಕ್ಕಾಧಿಕಾರಿ ವೆಂಕಟೇಶ ಹಟ್ಟಿಯವರ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ವಿವಿಧ ಪಿಂಚಣಿ ಪಡೆಯುತ್ತಿರುವ ಸುಮಾರು 3,000 ಫಲಾನುಭವಿಗಳನ್ನು ಹೊಂದಿದ್ದಾರೆ.

ಈ ಪ್ರದೇಶಗಳಲ್ಲಿನ ಫಲಾನುಭವಿಗಳ ಆಧಾರ್ ಸೀಡಿಂಗ್ ಕಾರ್ಯವನ್ನು ಕಾಲಮಿತಿಯಲ್ಲಿ ಮಾಡಲು ಅಗತ್ಯ ದಾಖಲೆ, ಮಾಹಿತಿ ನೀಡುವಂತೆ ತಿಳಿಸಿ ಫಲಾನುಭವಿಗಳಿಗೆ ಪತ್ರ ಬರೆದಿದ್ದಾರೆ. ಪಿಂಚಣಿ ಸೌಲಭ್ಯವನ್ನು ಈ ಹಿಂದೆ ಫಲಾನುಭವಿಗಳು ಅಂಚೆಯ ಮೂಲಕ ಪಡೆಯುತ್ತಿದ್ದರು. ಅಂಚೆಯ ಅಣ್ಣನೇ (ಪೋಸ್ಟ್‍ಮ್ಯಾನ್) ಫಲಾನುಭವಿಗಳ ಮನೆಗೆ ತೆರಳಿ ಪಿಂಚಣಿ ಹಣ ನೀಡುತ್ತಿದ್ದರು.
ಇದನ್ನು ಗಮನಿಸಿರುವ ಗ್ರಾಮ ಲೆಕ್ಕಾಧಿಕಾರಿ ತಮ್ಮ ಪ್ರದೇಶ ವ್ಯಾಪ್ತಿಯ ಪ್ರತಿಯೊಬ್ಬ ಪಿಂಚಣಿ ಫಲಾನುಭವಿಯ ನಿಖರ ವಿಳಾಸ, ಪತ್ತೆ ಹಾಗೂ ದಾಖಲೆ ಪಡೆಯಲು ಆರಂಭಿಕವಾಗಿ ಸುಮಾರು 180 ಜನರಿಗೆ ಪತ್ರ ಬರೆದು ಅಂಚೆಯ ಮೂಲಕ ಕಳುಹಿಸಿದ್ದಾರೆ.
ಇದರಿಂದಾಗಿ ಫಲಾನುಭವಿ ವಲಸೆ ಹೋಗಿದ್ದರೆ, ನಿಧನವಾಗಿದ್ದರೆ ಮತ್ತು ವಿಳಾಸ ಬದಲಾಗಿದ್ದರೆ ಸರಳವಾಗಿ ಮತ್ತು ಖಚಿತವಾಗಿ ತಿಳಿದುಬರುತ್ತದೆ. ರಾಜ್ಯ ಸರಕಾರದ ಪ್ರಮುಖ ಯೋಜನೆಗಳ ರಾಯಭಾರಿಗಳಾಗಿ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿವಿಧ ಯೋಜನೆ, ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯಗಳನ್ನು ವಹಿಸಲಾಗುತ್ತಿದೆ.
ನಿಗದಿತ ಗುರಿ ಸಾಧಿಸುವ ಉದ್ದೇಶದಿಂದ ಪತ್ರ ಮೂಲಕ ಫಲಾನುಭವಿಗಳ ಸಂಪರ್ಕ ಸಾಧಿಸಲು ಈ ಗ್ರಾಮಲೆಕ್ಕಾಧಿಕಾರಿ ಹೊಸ ಮಾರ್ಗ ಹುಡುಕಿದ್ದು ಇತರರಿಗೆ ಮಾದರಿಯಾಗಿದೆ.












Click it and Unblock the Notifications