NWKRTC: ತಿಂಗಳಾದರೂ ಬಸ್ ಪಾಸ್ ಸಿಗದೇ ವಿದ್ಯಾರ್ಥಿಗಳಿಗೆ ಸಮಸ್ಯೆ
ಧಾರವಾಡ, ಜೂನ್ 18: ಬೇಸಿಗೆ ಕಳೆದು ಶಾಲೆಗಳು ಆರಂಭವಾಗಿ ಮೂರು ವಾರ ಕಳೆದರೂ ಇನ್ನೂ ಧಾರವಾಡ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಗೆ ವ್ಯವಸ್ಥೆ ಆಗಿಲ್ಲ. ನಿತ್ಯ ದುಡ್ಡು ಕೊಟ್ಟು ಓಡಾಡುವ ಸ್ಥಿತಿ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಶಾಲಾ ಕಾಲೇಜು ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ರಿಯಾಯಿತಿ ದರದಲ್ಲಿನ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಾರಿಗೆ ಇಲಾಖೆ ಈ ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿಯೇ ತಿಂಗಳು ಕಳೆದರೂ ಪಾಸ್ ಸಿಗದೇ ವಿದ್ಯಾರ್ಥಿಗಳು ವಿತರಣಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುತ್ತಿದ್ದಂತೆ ಬಸ್ ಬಸ್ ವಿತರಣೆಗೆ ಅಗತ್ಯ ತಯಾರಿ ಮಾಡಿಕೊಳ್ಳುವುದು ಸಾರಿಗೆ ಇಲಾಖೆ ಆದ್ಯ ಕರ್ತವ್ಯವಾಗಿ. ಆದರೆ ಧಾರವಾಡ ಜಿಲ್ಲೆಯಲ್ಲಿಶಾಲೆ- ಕಾಲೇಜು ಆರಂಭವಾಗಿ ತಿಂಗಳು ಕಳೆದರೂ ಸಾರಿಗೆ ಸಂಸ್ಥೆಯ ಬಸ್ ಪಾಸ್ ವಿತರಣೆ ವ್ಯವಸ್ಥೆ ಸುಧಾರಿಸಿದಂತೆ ಕಾಣುತ್ತಿಲ್ಲ.
ವಾರಗಳಿಂದಲೂ ವಿದ್ಯಾರ್ಥಿಗಳ ಅಲೆದಾಟ ತಪ್ಪಲಿಲ್ಲ
ಒಂದು ತಿಂಗಳಾದರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ರಿಯಾಯಿತಿ ದರದ ಪಾಸ್ ಪಡೆಯಲು ವಾರಗಟ್ಟಲೇ ಅಲೆದಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಪ್ರಸಕ್ತ ಸಾಲಿನ ಶಾಲೆ- ಕಾಲೇಜುಗಳು ಜೂನ್ 1ರಿಂದ ಕಾರ್ಯಾರಂಭಿಸಿವೆ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಟಿಕೆಟ್ ಪಡೆದೇ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವಂತಾಗಿದೆ. ಹೆಚ್ಚುವರಿ ಕೌಂಟರ್‌ಗಳನ್ನು ಆರಂಭಿಸುವಂತೆ ಪಾಲಕರು- ವಿದ್ಯಾರ್ಥಿಗಳ ಒತ್ತಾಯಿಸಿದರೂ ಸಂಸ್ಥೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸೂಕ್ತ ಕ್ರಮ ವಹಿಸಿಲ್ಲ ಎಂದು ಆರೋಪಗಳು ಕೇಳಿ ಬಂದಿವೆ.
ಕೆಲವೊಮ್ಮೆ ಸರ್ವರ್ ಸಮಸ್ಯೆ
ಶಾಲೆ- ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರವೇಶ ಪಡೆದ ರಸೀದಿ, ಆಧಾರ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ದಾಖಲೆ ನೀಡಿ ನೋಂದಾಯಿಸಿಕೊಳ್ಳಲೂ ಕೆಲವೊಮ್ಮೆ ಸರ್ವರ್ ಸಮಸ್ಯೆ ಉಂಟಾಗುತ್ತದೆ.
ಹಾಗಂತೆ ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ಅರ್ಜಿ ಅಪ್‌ಲೋಡ್ ಮಾಡಲು ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ. ಕೆಲವು ಖಾಸಗಿ ಆನ್‌ಲೈನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು 200 ರೂಪಾಯಿವರೆಗೆ ಹಣ ವಸೂಲಿ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ತೊಂದರೆ
ಅರ್ಜಿ ಸಲ್ಲಿಸಿದ ನಂತರ ಹೊಸ ಬಸ್ ನಿಲ್ದಾಣದ ಕೌಂಟರ್‌ಗೆ ಹೋಗಿ ವಿದ್ಯಾರ್ಥಿ ಬಸ್ ಪಾಸ್ ಮಾಡಿಸಬೇಕು. ಆನ್‌ಲೈನ್ ಸೆಂಟರ್‌ಗಳಲ್ಲಿ ಸಲ್ಲಿಸಿದ ಅರ್ಜಿ ಸಾರಿಗೆ ಸಂಸ್ಥೆಯಿಂದ ಅನುಮೋದನೆಯಾಗಬೇಕಾದರೆ ಕನಿಷ್ಠ 24 ಗಂಟೆ ಬೇಕು. ಈ ಮಾಹಿತಿ ಇಲ್ಲದ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಧಾರವಾಡದ ಹೊಸ ಬಸ್ ನಿಲ್ದಾಣ ಮಾತ್ರವಲ್ಲದೆ, ಕಲಾಭವನದಲ್ಲಿರುವ ಹುಬ್ಬಳ್ಳಿ ಧಾರವಾಡ ಪಾಲಿಕೆಯ ವಲಯ 12ರ ಕರ್ನಾಟಕ ಒನ್ ಕೇಂದ್ರದಲ್ಲೂ ಪಾಸ್ ವಿತರಣೆ ವ್ಯವಸ್ಥೆ ಇದೆ. ಇಲ್ಲಿರುವ 6 ಕೌಂಟರ್‌ಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಒಂದು ಕೌಂಟರ್ ಮೀಸಲಿದೆ. ಉಳಿದ 4 ಕೌಂಟರ್‌ಗಳಲ್ಲಿ ತೆರಿಗೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಬಿಲ್ ಪಾವತಿ ನಡೆಯುತ್ತಿದೆ.
ಇತರೆಡೆ ವಿತರಣೆ ಕೇಂದ್ರ ತೆರೆಯಿರಿ
ತೆರಿಗೆ, ಇತರ ಬಿಲ್ ಆಕರಣೆಗೆ ಇರುವ ಸಿಬ್ಬಂದಿ ದಿನವಿಡೀ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿಯಾಗಿ ಪಾಸ್ ವಿತರಣಾ ಕೌಂಟರ್ ಮಾಡಿರುವುದರಿಂದ ನೂಕುನುಗ್ಗಲು ಇಲ್ಲಿ ಸಾಮಾನ್ಯ. ನಗರದ ಇನ್ನುಳಿದ ವಲಯ ಕಚೇರಿಗಳಲ್ಲೂ ಪಾಸ್ ವಿತರಣಾ ಕೌಂಟರ್‌ಗಳನ್ನು ತೆರೆದರೆ ವಿದ್ಯಾರ್ಥಿಗಳು ಸರದಿ ಸಾಲಿನ ನಿಲ್ಲುವುದು ತಪ್ಪುತ್ತದೆ ಎಂದು ಪೋಷಕರು ಸಲಹೆ ನೀಡಿದ್ದಾರೆ.












Click it and Unblock the Notifications