ಧಾರವಾಡ: ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಕಲ್ಲು ಎಸೆದು ಹತ್ಯೆ ಮಾಡಿದ ಯುವಕರು
ಧಾರವಾಡ, ಮಾರ್ಚ್ 28: ಯುವಕರ ಗುಂಪೊಂದು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಕಲ್ಲು ಎಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಹೊಸ ಎಪಿಎಂಸಿ ಬಳಿಯ ಮೇದಾರ ಓಣಿಯಲ್ಲಿ ನಿನ್ನೆ(ಮಾರ್ಚ್ 28) ಗುರುವಾರ ಸಂಜೆ ನಡೆದಿದೆ. ಇಲಯಾಸ್ ಮಕಾನದಾರ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇಲಯಾಸ್ ಮಕಾನದಾರ ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಈತನಿಗೆ ಪ್ರಪಂಚ ಜ್ಞಾನ ಇಲ್ಲ. ಹೀಗಾಗಿ ಮೇದಾರ ಓಣಿಯಲ್ಲಿ ಸಂಜೆ ಅಲೆದಾಡುತ್ತಿದ್ದ. ತನ್ನ ಪರಿಚಯಸ್ಥರು ಯಾರಾದರೂ ಬಂದು ಕರೆದುಕೊಂಡು ಹೋಗಬಹುದು ಎಂದು, ತಾನಿದ್ದ ಜಾಗದಲ್ಲೇ ಅತ್ತಿಂದಿತ್ತ ಓಡಾಡುತ್ತಿದ್ದ. ಈತನನ್ನು ನೋಡಿದ ಕೆಲ ಯುವಕರು ಹುಚ್ಚಾಟ ಮೆರೆದಿದ್ದು, ರಸ್ತೆ ಬಳಿ ನಿಂತಿದ್ದ ವ್ಯಕ್ತಿಗೆ ಮನಬಂದಂತೆ ಕಲ್ಲು ಎಸೆದಿದ್ದಾರೆ.

ನೋಡನೋಡುತ್ತಿದ್ದಂತೆ ಯುವಕರು ಇಲಯಾಸ್ ಮಕಾನದಾರ ಮೇಲೆ ಕಲ್ಲಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಲಯಾಸ್ ಮಕಾನದಾರ ತಲೆಗೆ ಗಂಭೀರವಾದ ಗಾಯವಾಗಿದೆ. ತೀವ್ರ ಗಾಯಗೊಂಡ ಇಲಯಾಸ್‌ನನ್ನು ನೋಡಿದ ಸ್ಥಳೀಯರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ತೀವ್ರ ರಕ್ತಸ್ರಾವವಾಗಿದ್ದರಿಂದ ಇಲಯಾಸ್ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಿಸಿ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಇಲಯಾಸ್ ಮಕಾನದಾರ ಮೇಲೆ ಕಲ್ಲಿನ ದಾಳಿ ಮಾಡಿದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ನೆಲಕ್ಕುರುಳಿದ ಬೃಹತ್ ಗಾತ್ರದ ಮರ: ಬೀದಿಗೆ ಬಿದ್ದ ಬಡ ಕುಟುಂಬಗಳು
ಹುಬ್ಬಳ್ಳಿ: ಬೃಹತ್ ಗಾತ್ರದ ಮರವೊಂದು ನೆಲಕ್ಕೆ ಬಿದ್ದಿರುವುದು ಮಾತ್ರವಲ್ಲದೇ ದುಡಿದು ತಿನ್ನುವ ಬಡ ಕುಟುಂಬಗಳ ಜೀವನಕ್ಕೆ ಆಧಾರವಾಗಿದ್ದ ವಾಹನಗಳ ಮೇಲೆಯೇ ಬಿದ್ದಿರುವುದು ಬಡ ಕುಟುಂಬಗಳು ಕಣ್ಣೀರು ಹಾಕುವಂತಾಗಿದೆ. ರಸ್ತೆಯಲ್ಲಿ ಏಕಾಏಕಿ ಬೃಹತ್ ಗಾತ್ರದ ಮರ ಬಿದ್ದಿದ್ದು, ಬಡ ಕುಟುಂಬಕ್ಕೆ ಆಸರೆಯಾಗಿದ್ದ ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಮಂಜುನಾಥ ನಗರದ ಬಳಿಯಲ್ಲಿ ಬೃಹತ್ ಗಾತ್ರದ ಮರವೊಂದು ಏಕಾಏಕಿ ನೆಲಕ್ಕೆ ಬಿದ್ದಿರುವ ಪರಿಣಾಮ ಓಮಿನಿ ಕಾರ್ ಹಾಗೂ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ. ಆಟೋ ಹಾಗೂ ಓಮಿನಿ ಓಡಿಸಿ ಜೀವನ ನಡೆಸುವ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆಟೊ ಚಾಲಕ ರಸುಲ್ ಸಾಬ ನದಾಫ್, ಓಮಿನಿ ಚಾಲಕ ಸಿಖಂದರ್ ನದಾಫ್ ಎನ್ನುವವರ ವಾಹನಗಳು ಸಂಪೂರ್ಣ ಹಾಳಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಳೆ ಗಾಳಿಗೆ ಮರ ಬಿದ್ದಿದೆಯೋ? ಅಥವಾ ಸಮೀಪದಲ್ಲೇ ನಡೆಯುತ್ತಿದ್ದ ಕಟ್ಟಡ ನಿರ್ಮಾಣ ಕಾಮಾಗಾರಿಯಿಂದ ಮರ ಬಿದ್ದಿದೆಯೋ ಎನ್ನುವುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ನೊಂದವರಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕಿದೆ.












Click it and Unblock the Notifications