SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ, ವಿದ್ಯಾಕಾಶಿ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮ
ಧಾರವಾಡ, ಫೆಬ್ರವರಿ 17: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಹತ್ತಿರವಾಗುತ್ತಿವೆ. ಹಲವು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಭಯವಿದೆ. ಪೋಷಕರು ಸಹ ಮಕ್ಕಳ ಮುಂದಿನ ಭವಿಷ್ಯದ ಕುರಿತು ಕನಸು ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು, ಪೋಷಕರ ಜೊತೆ ಸಂವಾದ ನಡೆಸಿ ಪರೀಕ್ಷೆಯ ಕುರಿತು ಮಾಹಿತಿ ನೀಡಿ ಅವರ ಭಯ ದೂರ ಮಾಡಿದರು. ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಭರವಸೆ ತುಂಬಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಧಾರವಾಡದ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳಿಗೆ ಎಷ್ಟು ಸಮಯ ನೀಡಬೇಕು, ಮೌಲ್ಯಮಾಪಕರಿಗೆ ತಿಳಿಯುವಂತೆ ದುಂಡಾಗಿ ಅಕ್ಷರಗಳನ್ನು ಹೇಗೆ ಬರೆಯಬೇಕು ಎಂಬುವುದು ಸೇರಿದಂತೆ ವಿದ್ಯಾರ್ಥಿಗಳಿಗೆ ಹಲವು ಸಲಹೆಗಳನ್ನು ನೀಡಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಜೊತೆ ಜಿಲ್ಲಾಧಿಕಾರಿಗಳು ನೆಲದಲ್ಲಿ ಕುಳಿತು ಬಿಸಿಯೂಟ ಸವಿದರು. ಅನ್ನ, ಬಿಸಿ ಬೇಳೆಬಾತ್, ಚಿಕ್ಕಿ, ಮೊಟ್ಟೆ, ಹಸಿರು ತರಕಾರಿ, ಮಜ್ಜಿಗೆ, ಜಿಲೇಬಿ ಸವಿದರು. ನಿತ್ಯ ಎಷ್ಟು ಸಮಯಕ್ಕೆ ಊಟ ಕೊಡುತ್ತಾರೆ?, ಉಟದ ಗುಣಮಟ್ಟ ಹೇಗಿದೆ? ಎಂದು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದುಕೊಂಡರು.
ಜಿಲ್ಲೆ ಮೊದಲ ಸ್ಥಾನಕ್ಕೆ ಬರಬೇಕು: ಈ ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಗಣನೀಯ ಸಾಧನೆ ಮಾಡಬೇಕು ಮತ್ತು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ 'ಮಿಷನ್ ವಿದ್ಯಾಕಾಶಿ' ಎಂಬ ಹೆಸರಿನಡಿ ಧಾರವಾಡ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿದೆ.
"ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲಿ ಧಾರವಾಡ ಜಿಲ್ಲೆ ಟಾಪ್ 10ರ ಪಟ್ಟಿಯಲ್ಲಿ ಬರಬೇಕು. ಕಲಿಕಾ ಗುಣಮಟ್ಟ ಸುಧಾರಿಸಿ ಆ ಮೂಲಕ ವಿದ್ಯಾಕಾಶಿ ಎಂಬ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ದಿವ್ಯಪ್ರಭು ಅವರ ಅಧ್ಯಕ್ಷತೆಯಲ್ಲಿ 'ಮಿಷನ್ ವಿದ್ಯಾಕಾಶಿ' ಕಾರ್ಯಕ್ರಮ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, "ಪ್ರಸಕ್ತ ವರ್ಷದ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯು ಒಂದಂಕಿ ಸ್ಥಾನ ಪಡೆಯಬೇಕು. ನಗರಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಾಣರಿದ್ದರೂ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಪಾಠ-ಪ್ರವಚನ ಮಾತ್ರವಲ್ಲದೇ ಆತ್ಮವಿಶ್ವಾಸ ಮೂಡಿಸುವ ಕಲಿಕೆ ಸಹ ಹೇಳಿ ಕೊಡಬೇಕು" ಎಂದರು.
ಅನೇಕ ಮಕ್ಕಳು ತಮಗಿರುವ ಸಂದೇಹಗಳನ್ನು ಜಿಲ್ಲಾಧಿಕಾರಿಗಳ ಬಳಿ ಕೇಳಿ ಬಗೆಹರಿಸಿಕೊಂಡರು. ಜಿಲ್ಲಾಧಿಕಾರಿಗಳು ಮಕ್ಕಳಿಗೆ, ಪರೀಕ್ಷೆ ಹೇಗೆ ಎದುರಿಸಬೇಕು? ಅದಕ್ಕೆ ತಯಾರಿ ಹೇಗೆ ಮಾಡಿಕೊಳ್ಳಬೇಕು? ಎಂಬ ವಿಷಯಗಳನ್ನು ತಿಳಿಸಿದರು.
"ಜೀವನದಲ್ಲಿ ಉನ್ನತ ಗುರಿ ಇರಬೇಕು. ಪ್ರತಿದಿನ ವೇಳಾಪಟ್ಟಿ ಅನುಸಾರ ಅಭ್ಯಾಸ ಮಾಡಬೇಕು. ಕಠಿಣ ಎನಿಸುವ ವಿಷಯಗಳನ್ನು ಮೊದಲು ಓದಬೇಕು. ಒತ್ತಡಕ್ಕೆ, ಉದ್ವೇಗಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ರೂಢಿ ಪರೀಕ್ಷೆಗಳನ್ನು ಬರೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ದೂರವಾಗುತ್ತದೆ" ಎಂದರು.
"ಎಲ್ಲಾ ಮಕ್ಕಳು ಕಷ್ಟಪಟ್ಟು ಪ್ರಾಮಾಣಿಕತೆಯಿಂದ ನಿರಂತರವಾಗಿ ಓದಿ, ತಮ್ಮಂತೆ ಜಿಲ್ಲಾಧಿಕಾರಿ ಆಗಬೇಕು. ಐಎಎಸ್, ಐಪಿಎಸ್ ಹುದ್ದೆಗಳಿಗೆ ಆಯ್ಕೆ ಆಗಬೇಕು. ಅಂತಹ ಕನಸು, ಛಲ ಈಗಿನಿಂದಲೇ ಬೆಳಿಸಿಕೊಳ್ಳಬೇಕು. ತಾವು ಸಹ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ರಾಜ್ಯಕ್ಕೆ ಮೊದಲ ಸ್ಥಾನ ಬಂದಿದ್ದೆ, ನಂತರ ಡಿಸಿ ಆಗಿರುವೆ. ನೀವು ಒಳ್ಳೆಯ ಅಧಿಕಾರಿ ಆಗಬೇಕು" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
"ಪರೀಕ್ಷೆ ಹತ್ತಿರ ಬಂದಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಚನ್ನಾಗಿ ಓದುವ ವಾತಾವರಣ ಕಲ್ಪಿಸಬೇಕು. ಟಿವಿ, ಮೊಬೈಲ್‍ಗಳಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಪಾಲಕರೂ ಸಹ ಮನೆಯಲ್ಲಿ ಟಿವಿ, ಮೊಬೈಲ್‍ಗಳನ್ನು ಅಗತ್ಯವಿರುವಷ್ಟು ಮಾತ್ರ ಬಳಸಿ, ಮಕ್ಕಳ ಓದಿನ ಕಡೆಗೆ ಗಮನ ಹರಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4ರ ತನಕ ನಡೆಯಲಿವೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಶಾಲೆಗಳು, ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications