ಸೀಗೆ ಹುಣ್ಣಿಮೆ ದಿನ ಅಪ್ಪುಗೆ ವಿಶೇಷ ಪೂಜೆ ಸಲ್ಲಿಸಿದ ಧಾರವಾಡ ರೈತರು
ಧಾರವಾಡ, ಅ.09: ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ವಿರಾಜಮಾನರಾದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನೆನಪು ಸದಾ ಹಸಿರಾಗಿದೆ. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಜನ ಅಲ್ಲಿ ನೆಚ್ಚಿನ ನಟ ಅಪ್ಪು ನೆನಪನ್ನು ಮರಳುವಂತೆ ಮಾಡುತ್ತಾರೆ.
ಪುನೀತ್ ರಾಜ್‌ಕುಮಾರ್ ಅವರಿಗೆ ಈ ಬಾರಿಯ ದಸರಾದುದ್ದಕ್ಕೂ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ನವರಾತ್ರಿಯ ದಿನಗಳಲ್ಲಿ ಅಪ್ಪು ಗುಣಗಾನದ ಮೆರವಣಿಗೆ ನಡೆದಿದೆ.
ಕಳೆದ ವರ್ಷ ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಠಾತ್ ನಿರ್ಗಮಿಸಿದಾಗ ಕಣ್ಣೀರಿಡದವರಿಲ್ಲ. ಆ ನೋವಿನ ಶೋಕ ಇನ್ನೂ ಮಡುಗಟ್ಟಿದೆ. ನಾಡಿನಾದ್ಯಂತ ನಾನಾ ವೇದಿಕೆಗಳಲ್ಲಿ ಈ ಶೋಕಾಚರಣೆ ಆಗಾಗ ವ್ಯಕ್ತವಾಗುತ್ತಲೇ ಇದೆ.

ಅಪ್ಪು ಅಭಿಮಾನಿಗಳಂತು ಇನ್ನೂ ದುಃಖದಿಂದ ಹೊರ ಬಂದಿಲ್ಲ. ಕೆಲವರು ಅವರು ನಟಿಸಿರುವ ಚಿತ್ರಗಳನ್ನು ಆಗಿಂದಾಗ್ಗೆ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿದೆ. ಇದೆಲ್ಲವೂ ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿ. ಈಗ ಸೀಗೆ ಹುಣ್ಣಿಮೆ ಸಂದರ್ಭದಲ್ಲೂ ಅಪ್ಪು ನೆನಪನ್ನು ರೈತರು ಮೆಲಕು ಹಾಕಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಒಂದು ವಿಶೇಷವಾದ ದಿನ. ಇದು ಭೂಮಿ ತಾಯಿ ಒಳ್ಳೆಯ ಬೆಳೆಯನ್ನು ಹೊತ್ತು ನಿಂತಾಗ ಭೂಮಿ ತಾಯಿಗೆ ಸೀಮಂತ ಕಾರ್ಯವನ್ನು ಮಾಡುತ್ತಾರೆ. ವಿಶೇಷವಾದ ರುಚಿಕರವಾದ ಅಡುಗೆಯನ್ನು ಮಾಡಿ ಮನೆ ಮಂದಿಯಲ್ಲ ಭೂಮಿ ತಾಯಿಗೆ ನಮನ ಸಲ್ಲಿಸುತ್ತಾರೆ.
ಈ ವರ್ಷ ಸೀಗೆ ಹುಣ್ಣಿಮೆ ದಿನವನ್ನು ಅಭಿಮಾನಿಗಳ ಮನಸ್ಸಿನಲ್ಲಿ ದೇವರಾಗಿ ಉಳಿದುಕೊಂಡಿರುವ ಪುನೀತ್ ರಾಜ್‌ಕುಮಾರ್ ಅವರಿಗೆ ಪಾಂಡವರೊಂದಿಗೆ ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ರೈತರು ಗೌರವ ಸಮರ್ಪಣೆ ಮಾಡಿದರು.

ಹೌದು, ಸೀಗೆಹುಣ್ಣಿಮೆ ಹಿನ್ನೆಲೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಶೋಕ್ ಕುರಿ ಎನ್ನುವ ರೈತ ಅಪ್ಪು ಫೋಟೋ ಇಟ್ಟು ಭೂಮಿ ತಾಯಿಗೆ ಪೂಜೆ ಮಾಡಿದ್ದಾರೆ. ಅಪ್ಪುವಿಗೆ ಪೂಜೆ ಸಲ್ಲಿಸುವ ಮೂಲಕ ರೈತರು ಈ ಬಾರಿ ಸೀಗೆ ಹುಣ್ಣಿಮೆಯನ್ನು ಆಚರಿಸಿದರು.












Click it and Unblock the Notifications