ರವಿ ಬೆಳಗೆರೆಗೆ ಎದೆನೋವು: ಧಾರವಾಡದಲ್ಲಿ ಆಸ್ಪತ್ರೆಗೆ ದಾಖಲು
ಅನಾರೋಗ್ಯದಿಂದಾಗಿ ಪತ್ರಕರ್ತ ರವಿ ಬೆಳಗೆರೆ ಅವರು ಧಾರವಾಡದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಸ್ ಡಿಎಂ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ, ಜೂನ್ 24: ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿರುವ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರಿಗೆ ಶನಿವಾರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈದ್ಯರ ಅಭಿಪ್ರಾಯ ಪಡೆದ ನಂತರ ರವಿ ಬೆಳಗೆರೆಯವರನ್ನು ಮತ್ತೆ ರಾಮನಗರಕ್ಕೆ ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದಾರೆ. ಧಾರವಾಡ ಎಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಬಂಧನದ ಭೀತಿ ಏಕೆ?: ತಮ್ಮ ವಿರುದ್ಧ ಅವಹೇಳನಕಾರಿಯಾಗಿ ವರದಿ ಪ್ರಕಟ ಮಾಡಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಶಾಸಕ ಶಿರಗುಪ್ಪ ನಾಗರಾಜ್ ಹಕ್ಕು ಬಾಧ್ಯತೆ ಸಮಿತಿಗೆ ದೂರು ನೀಡಿದ್ದರು. ಈ ಆರೋಪ ಕೂಡ ಸಾಬೀತಾಗಿದೆ ಎಂದು ಹಕ್ಕು ಬಾಧ್ಯತೆ ಸಮಿತಿ ನೀಡಿದ್ದ ಶಿಫಾರಸ್ಸಿಗೆ ಸದನ ಸರ್ವಾನುಮತದ ಒಪ್ಪಿಗೆ ನೀಡಿತ್ತು.
ಹೀಗಾಗಿ, ರವಿ ಬೆಳಗೆರೆಯವರನ್ನು ಬಂಧಿಸಲು ರಾಮನಗರ ಪೊಲೀಸರು ಸಜ್ಜಾಗಿದ್ದಾರೆ. ಹಕ್ಕು ಚ್ಯುತಿ ಹಿನ್ನೆಲೆಯಲ್ಲಿ ಬೆಳಗೆರೆಯವರಿಗೆ 1 ವರ್ಷ ಜೈಲು ಹಾಗೂ 10 ಸಾವಿರ ರು. ದಂಡ ವಿಧಿಸಲು ವಿಧಾನಸಭೆ ಸದನ ಶಿಫಾರಸು ಮಾಡಿದೆ.












Click it and Unblock the Notifications