ತುಪ್ಪರಿ ಹಳ್ಳ, ಬೆಣ್ಣಿ ಹಳ್ಳ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ಕ್ರಮ
ಧಾರವಾಡ, ಜೂನ್. 08: ಜಿಲ್ಲೆಯಲ್ಲಿ ಮುಂಗಾರು ಪೂರ್ಣ ಆವರಿಸಿದ್ದು, ಮಳೆ ಸುರಿಯುತ್ತಿದೆ. ಜಿಲ್ಲೆಯ ಎರಡು ಮುಖ್ಯ ಹಳ್ಳಗಳಾದ ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳದ ಪ್ರವಾಹದ ಬಗ್ಗೆ ನಿರಂತರ ನಿಗಾ ವಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಎರಡು ಹಳ್ಳಗಳಿಗೆ ಸಂಬಂಧಿಸಿದ ಪಿಡಿಓಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತಾಲೂಕು ಆಡಳಿತಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನೀರಿನ ಮಟ್ಟದ ಏರಿಕೆ ಹಾಗೂ ಪ್ರವಾಹದ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಜೊತೆಗೆ ಜಿಲ್ಲೆಯ ಮಳೆ ಪ್ರಮಾಣ ಮತ್ತು ಹಾನಿ, ಕುಡಿಯುವ ನೀರು ಮತ್ತು ಮೇವು ಸಂಗ್ರಹಣೆ ಹಾಗೂ ಬೆಳೆಹಾನಿ ಪರಿಹಾರ ಪ್ರಗತಿ ಕುರಿತು ಪರಿಶೀಲಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ಕೆರೆಗಳು ತುಂಬುತ್ತಿವೆ. ಹಳ್ಳಗಳು ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ಕಂದಾಯ, ಕೃಷಿ ಮತ್ತು ಪೊಲೀಸ್ ಇಲಾಖೆ ಜಾಗೃತಿ ವಹಿಸಿ, ಜನರ ಜೀವ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮತ್ತು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ಸೀಗುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ನೀಡಿದ್ದಾರೆ.
ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹದ ಎಚ್ಚರಿಕೆ
ಜಿಲ್ಲೆಯ ಎರಡು ಮುಖ್ಯ ಹಳ್ಳಗಳಾದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ಉಂಟಾದರೆ ಸಮರ್ಥವಾಗಿ ನಿರ್ವಹಿಸಿ, ಜನ-ಜಾನುವಾರ ಜೀವ ಹಾನಿ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣ ಬಾಧಿತ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸ್ಥಳ ಗುರುತಿಸಿ, ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮಳೆ ಹಾನಿ, ಮಳೆ ಪ್ರವಾಹ, ಸಾರ್ವಜನಿಕ ದೂರುಗಳ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ವರದಿ ನೀಡಿ, ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ನಿರಂತರ ಮಳೆಯಿಂದಾಗಿ ಕೆರೆಗಳು ತುಂಬುತ್ತಿವೆ. ಕೆರೆಯ ಒಡ್ಡು ಒಡೆಯದಂತೆ ಮತ್ತು ಸುಸ್ಥಿತಿಯ ಗೇಟ್‍ಗಳು ಇರುವಂತೆ ಕೆರೆ ಮಾಲೀಕತ್ವ ಹೊಂದಿರುವ ಇಲಾಖೆಗಳು ಕ್ರಮವಹಿಸಬೇಕು. ಕೆರೆಯ ದಂಡೆಯಲ್ಲಿ ಸಾರ್ವಜನಿಕರು ಕೆರೆಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂದು ತಿಳಿಸಿದ್ದಾರೆ.
ಹಳ್ಳಗಳು ತುಂಬಿ ಹರಿಯುವದರಿಂದ ಗಿಡಗಂಟಿ, ತ್ಯಾಜ್ಯವಸ್ತುಗಳು ಹಳ್ಳದಲ್ಲಿ ಅಡ್ಡಲಾಗಿ, ನೀರು ಸರಾಗವಾಗಿ ಹರಿದು ಹೋಗಲು ಅಡಚಣೆ ಮಾಡುತ್ತವೆ. ಅಂತಹುಗಳನ್ನು ಈಗಲೇ ತೆರವುಗೊಳಿಸಬೇಕು. ಹಳ್ಳದ ಪ್ರವಾಹ ಹೆಚ್ಚಳ ಕುರಿತು ನಿರಂತರ ಮಾಹಿತಿ ಪಡೆದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ನೀರು, ಪ್ರವಾಹದಿಂದಾಗಿ ನೀರಿನ ಹರಿವು ಹೆಚ್ಚಳವಾಗಿ ಸೇತುವೆಗಳು ಮುಳುಗುತ್ತವೆ. ಅಗತ್ಯವಾದಲ್ಲಿ ತಾತ್ಕಾಲಿಕ ತಡೆಗೊಡೆ ನಿರ್ಮಿಸಿ, ಸಾರ್ವಜನಿಕರ ಸಂಚಾರ ನಿಯಂತ್ರಿಸಬೇಕೆಂದು ಸೂಚನೆ ನೀಡಿದ್ದಾರೆ.
ಕಂಬಾರಗಣವಿ ಸೇತುವೆ ಕಾಮಗಾರಿ ಮುಗಿಸಲು ಸೂಚನೆ
ಕಾಡಿನ ಅಂಚಿನಲ್ಲಿರುವ ಕಂಬಾರಗಣಿ ಗ್ರಾಮ ಸಂಪರ್ಕಕ್ಕೆ ಇರುವ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬೇಗ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಕೆಲಸ ಮಾಡಿ, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕು. ಲೋಕೋಪಯೋಗಿ ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾಮಗಾರಿ ಮಾಡಬೇಕು.
ಕಂಬಾರಗಣವಿ ಸೇತುವೆ ಸೇರಿದಂತೆ ಯಾವುದೇ ಸೇತುವೆ, ಕೆರೆಗಳಿಂದ ಸಾರ್ವಜನಿಕ ಹಾನಿ ಆದರೆ, ಅದರ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಭರಿಸಲು ಆದೇಶಿಸಲಾಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.












Click it and Unblock the Notifications