ಹುಬ್ಬಳ್ಳಿ : ಮಠದ ಆವರಣದಲ್ಲಿ ಸೆಕ್ಷನ್ 144
ಹುಬ್ಬಳ್ಳಿ, ನ.22 : ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಶನಿವಾರ ಪೀಠ ತ್ಯಾಗ ಮಾಡಿದ್ದು, ಮಠದಲ್ಲಿ ಮತ್ತೊಂದು ಸುತ್ತಿನ ವಿವಾದ ಹುಟ್ಟಿಕೊಂಡಿದೆ. ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 24 ಗಂಟೆಗಳ ನಿಷೇಧಾಜ್ಞೆ ಜಾರಿಗೊಳಿಸಿ ಹುಬ್ಬಳ್ಳಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶನಿವಾರ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಮಠದ ಇತ್ತೀಚಿನ ಬೆಳವಣಿಗೆಗಳು ತಮಗೆ ನೋವುಂಟು ಮಾಡಿವೆ. ಮನಃಶಾಂತಿಗಾಗಿ ತಾವು ಪೀಠ ತ್ಯಾಗ ಮಾಡುತ್ತಿರುವುದಾಗಿ ಘೋಷಿಸಿದರು.

ಕೆಲವು ದಿನಗಳ ಹಿಂದೆ ಮೂರು ಸಾವಿರ ಮಠದಲ್ಲಿ ಉತ್ತರಾಧಿಕಾರಿ ವಿವಾದ ಹುಟ್ಟಿಕೊಂಡಿತ್ತು. ಪೀಠಾಧ್ಯಕ್ಷರಾಗಿರುವ ಶ್ರೀ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡುತ್ತೇನೆ, ನೂತನ ಪೀಠಾಧೀಶರಾಗಿ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ನೇಮಕ ಮಾಡುತ್ತೇನೆ ಎಂದು ಹೇಳಿದ್ದು, ವಿರೋಧಕ್ಕೆ ಕಾರಣವಾಗಿತ್ತು. [ಉತ್ತರಾಧಿಕಾರಿ ವಿವಾದಕ್ಕೆ ತೆರೆ]
ಈ ಬಗ್ಗೆ ಹಲವಾರು ಸುತ್ತಿನ ಸಭೆ ನಡೆದಿತ್ತು, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಎರಡು ದಿನಗಳ ಕಾಲ ಮಠವನ್ನು ತೊರೆದಿದ್ದರು. ನಂತರ ಮಠಕ್ಕೆ ಆಗಮಿಸಿದ್ದ ಅವರು, ಸದ್ಯ ಪೀಠತ್ಯಾಗ ಮಾಡುವುದಿಲ್ಲ. ಭಕ್ತರೊಂದಿಗೆ ಚರ್ಚಿಸಿ ಉತ್ತರಾಧಿಕಾರಿ ಆಯ್ಕೆ ಮಾಡಲಾಗುತ್ತದೆ ಎಂದು ಘೋಷಿಸಿ ಎಲ್ಲಾ ವಿವಾದಗಳಿಗೆ ತೆರೆ ಎಳೆದಿದ್ದರು. [ಹುಬ್ಬಳ್ಳಿ ಮಠದಲ್ಲಿ ಏನಿದು ವಿವಾದ?]
ಆದರೆ, ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಸ್ವಾಮೀಜಿಗಳು ಪೀಠ ತ್ಯಾಗ ಮಾಡಿರುವುದು ಮತ್ತೊಂದು ಸುತ್ತಿನ ವಿವಾದ ಹುಟ್ಟು ಹಾಕಿದೆ. ಭಾನುವಾರ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಚರ್ಚಿಸಲು ಭಕ್ತರ ಸಭೆ ಕರೆಯಲಾಗಿತ್ತು. ಆದರೆ, ಮಠದ ಆವರಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗು ಸಾಧ್ಯತೆ ಇರುವುದರಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ಅವರು ಮಠದ ಆವರಣದಲ್ಲಿ 24 ಗಂಟೆಗಳ ಕಾಲ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.












Click it and Unblock the Notifications