ಧಾರವಾಡದ ಸರ್ಕಾರಿ ವಸತಿ ನಿಲಯಕ್ಕೆ ಸಚಿವ ಸಂತೋಷ ಲಾಡ್ ದಿಢೀರ್ ಭೇಟಿ
ಧಾರವಾಡ, ಜುಲೈ 13: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಧಾರವಾಡ ನಗರದ ಸೈದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ದಿಢೀರ್ ದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿನಿಯರ ಊಟ, ಗ್ರಂಥಾಲಯ, ಓದುವ ಕೊಠಡಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೊಂದಿಗೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಮಿಸಿದ ಸಚಿವರು, ನೇರವಾಗಿ ಅಡುಗೆ ಕೊಣೆಗೆ ಭೇಟಿ ನೀಡಿ, ಆಹಾರ ತಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ ಹಾಗೂ ರುಚಿ ನೋಡಿದರು. ಬಳಿಕ ಊಟದ ಸಭಾಂಗಣದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಿ, ಅವರ ಓದು, ಹಾಸ್ಟೆಲ್ ಸೌಲಭ್ಯ, ಇಲಾಖೆ ಅಧಿಕಾರಿಗಳು ತೋರುವ ಕಾಳಜಿ, ಆರೋಗ್ಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಸಚಿವರು, ಬೇಡಿಕೆ ಅನುಸಾರ ವಸತಿ ನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು ಎಂದು ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಅಲ್ಲದೇ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರು ಇಚ್ಛಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವದಾಗಿ ಸಚಿವರು ಭರವಸೆ ನೀಡಿದರು.

ಜಿಲ್ಲೆಯ ಹಿರಿಯ ಅಧಿಕಾರಿಗಳು ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಸಾಧನೆಯ ಛಲ ಮತ್ತು ಆತ್ಮಗೌರದ ಬದುಕಿನ ಬಗ್ಗೆ ಪ್ರೇರಣೆ ನೀಡಬೇಕು. ಇಲಾಖೆ ಮುಖ್ಯಸ್ಥರು ವಸತಿ ನಿಲಯಗಳಿಗೆ ನಿರಂತರ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮೀಯ ಸ್ಪಂದನೆ ಬೆಳೆಸಬೇಕು. ಮಕ್ಕಳು ಡಿ.ಸಿ ದಿವ್ಯ ಪ್ರಭು ಅವರಂತ ಅಧಿಕಾರಿಗಳನ್ನು ಮಾದರಿಯಾಗಿ ಇಟ್ಟುಕೊಂಡು ಐಎಎಸ್, ಐಪಿಎಸ್ ಓದಿ, ಪಾಸ್ ಆಗುವ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.












Click it and Unblock the Notifications