ಧಾರವಾಡ: ಪ್ರೀತಿಗೆ ಪೋಷಕರ ವಿರೋಧ: ಪೊಲೀಸ್ ಠಾಣೆ ಮುಂದೆ ಮದುವೆಯಾದ ಪ್ರೇಮಿಗಳು
ಧಾರವಾಡ, ಡಿಸೆಂಬರ್ 05: ಪ್ರೀತಿಗೆ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಯುವಕ ಮತ್ತು ಯುವತಿ ಪೊಲೀಸ್ ಠಾಣೆಯ ಎದುರಿನಲ್ಲಿ ಮದುವೆಯಾದ ಘಟನೆ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಠಾಣೆಯ ಅಂಗಳದಲ್ಲಿಯೇ ಹಾರ ಬದಲಾವಣೆ, ಠಾಣೆಯ ಎದುರಿನಲ್ಲಿಯೇ ಮೊಳಗಿದ ಮಾಂಗಲ್ಯ ಧಾರಣೆಯ ಮಂತ್ರ ಮತ್ತು ಜೈ ಶ್ರೀರಾಮ ಘೋಷಣೆ ಇಂತಹ ಅಪರೂಪದ ಘಟನೆಗೆ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆ ಇಂದು ಸಾಕ್ಷಿಯಾಯಿತು.

ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮಾಯಕಾರ್ ಹಾಗೂ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರ ಎನ್ನುವ ಯುವಕ-ಯುವತಿ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿ ಮನೆಯವರಿಗೆ ಗೊತ್ತಾದಾಗ, ಯುವತಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಯುವಕ-ಯುವತಿ ಪರಸ್ಪರ ನಿರ್ಧರಿಸಿ ರಿಜಿಸ್ಟ್ರಾರ್ ವಿವಾಹಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದರು. ಬಳಿಕ ಯುವತಿ ಮನೆ ಬಿಟ್ಟು ಯುವಕನ ಬಳಿ ಬಂದಿದ್ದಳು. ಈ ಸುದ್ದಿ ತಿಳಿದ ಬಳಿಕ ಯುವತಿ ಮನೆಯವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ ಕಳಿಸಿದ್ದರು. ಪೊಲೀಸರಿಂದ ಒತ್ತಡ ಬಂದ ಕಾರಣ ಮಂಜುನಾಥ ಉಮೆಕುಲ್ಸುಮಾಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದರು.

ಆದರೆ ಈ ವಿಷಯ ತಿಳಿದ ತಕ್ಷಣವೇ ಪೊಲೀಸರ ವಿರುದ್ಧ ಠಾಣೆ ಎದುರಿನಲ್ಲಿಯೇ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಯಾವಾಗ ಬಜರಂಗದಳದಿಂದ ಪ್ರತಿಭಟನೆ ತೀವ್ರಗೊಂಡಿತೋ ಪೊಲೀಸರು ಅನಿವಾರ್ಯವಾಗಿ ವಶಕ್ಕೆ ಪಡೆದಿದ್ದ ಮಂಜುನಾಥ್‌ನನ್ನು ಬಿಡುಗಡೆ ಮಾಡಿದರು ಅಲ್ಲದೇ ಉಮೆಕುಲ್ಸುಮಾಳನ್ನು ಸಾಂತ್ವನ ಕೇಂದ್ರದಿಂದ ವಾಪಸ್ ಕರೆಯಿಸಿದರು.
ದೂರವಾಗಿದ್ದ ಪ್ರೇಮಿಗಳು ಪೊಲೀಸ್ ಠಾಣೆ ಎದುರಿನಲ್ಲಿ ಒಂದಾಗುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆ ಆವರಣದಲ್ಲಿಯೇ ಮದುವೆ ಮಾಡಿಸಿದರು. ಮದುವೆ ಬಳಿಕ ಯುವತಿ ತನ್ನ ಒಪ್ಪಿಗೆಯಿಂದಲೇ ಈ ಮದುವೆಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದು, ಪೊಲೀಸರು ವರ ಮಂಜುನಾಥ್ ಮೇಲಿದ್ದ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಅಲ್ಲದೇ ತನ್ನ ಪತಿ ಹಾಗೂ ಪತಿ ಮನೆಯವರಿಗೆ ಜೀವ ಬೆದರಿಕೆ ಇದೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.












Click it and Unblock the Notifications