ಧಾರವಾಡ ವಿವಿ ಕುಲಪತಿ ವಾಲೀಕರ್ ಗಿಲ್ಲ ಜಾಮೀನು
ಧಾರವಾಡ, ಅ.23 : ಅಕ್ರಮ ನೇಮಕಾತಿ ಸಂಬಂಧ ಬಂಧಿತರಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರ ಜಾಮೀನು ಅರ್ಜಿಯನ್ನು ಗುರುವಾರ ಲೋಕಾಯುಕ್ತ ವಿಶೇಷ ಕೋರ್ಟ್ ವಜಾಗೊಳಿಸಿದೆ.
ಆದರೆ ಇನ್ನುಳಿದ ಆರೋಪಿಗಳಾದ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.[ಕರ್ನಾಟಕ ವಿವಿ ಕುಲಪತಿ ಎಚ್.ಬಿ.ವಾಲೀಕಾರ ಬಂಧನ]

ಕರ್ನಾಟಕ ವಿವಿಯಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬ ಹಿನ್ನೆಲೆಯಲ್ಲಿ ವಾಲೀಕರ್ ಸೇರಿದಂತೆ ನಾಲ್ಕು ಜನರನ್ನು ಲೋಕಾಯುಕ್ತ ಪೊಲೀಸರು ಅಕ್ಟೋಬರ್ 20ರಂದು ಬಂಧಿಸಿದ್ದರು.
ಏನಿದು ಹಗರಣ : ವಿವಿ ಹಗರಣಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ನೇಮಕ ಮಾಡಿದ್ದ ಏಕಸದಸ್ಯ ಸಮಿತಿ ನೀಡಿದ ವರದಿಯನ್ವಯ ಕುಲಪತಿ ಸೇರಿ 11 ಜನರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವಂತೆ ವಿವಿ ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಈ ಸಂಬಂಧ ವಿಚಾರಣೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸರು ಅಕ್ಟೋಬರ್ 20ರಂದು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನೋಟಿಸ್ ಜಾರಿ ಮಾಡಿದ್ದರು.[ಧಾರವಾಡದ ಕರ್ನಾಟಕ ವಿವಿಯಲ್ಲಿ ಏನಿದು ಅಕ್ರಮ?]
ಅದರಂತೆ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ವಿಚಾರಣೆಗೆ ಹಾಜರಾಗಿದ್ದರು. ಕುಲಪತಿ ವಾಲೀಕಾರ್ ಲಿಖಿತವಾಗಿ ತಮ್ಮ ಹೇಳಿಕೆಯನ್ನು ಸಲ್ಲಿಸಿ ಖುದ್ದು ಹಾಜರಾಗಿರಲಿಲ್ಲ. ಆದ್ದರಿಂದ ಅಕ್ಟೋಬರ್ 20ರಂದು ಸಂಜೆ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.












Click it and Unblock the Notifications