ಕುಂದಗೋಳ ಉಪ ಚುನಾವಣೆ : 1 ನಾಮಪತ್ರ ತಿರಸ್ಕಾರ, 22 ಕ್ರಮ ಬದ್ಧ
ಧಾರವಾಡ, ಏಪ್ರಿಲ್ 30 : ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಇಂದು ನಡೆಯಿತು. ಮೇ 19ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಮಪತ್ರಗಳ ಪರಿಶೀಲನೆ ನಡೆಯಿತು. ಪಕ್ಷೇತರ ಅಭ್ಯರ್ಥಿ ದಯಾನಂದ ಚಿಕ್ಕಮಠ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದರು.
ದಯಾನಂದ ಚಿಕ್ಕಮಠ ಅವರು ಬೈಲಹೊಂಗಲ ತಾಲೂಕಿನ ನಿವಾಸಿಯಾಗಿದ್ದಾರೆ. ನಾಮಪತ್ರದ ಅರ್ಜಿಯೊಂದಿಗೆ ಅಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಭಾಗದ ಪ್ರಮಾಣೀಕೃತ ಪ್ರತಿಯನ್ನು ಬೈಲಹೊಂಗಲ ಚುನಾವಣಾಧಿಕಾರಿಗಳಿಂದ ಪಡೆದು ಸಲ್ಲಿಸಿರಲಿಲ್ಲ. ಆದ್ದರಿಂದ, ನಾಮಪತ್ರ ತಿರಸ್ಕಾರವಾಗಿದೆ.

ಕುಂದಗೋಳ ಉಪ ಚುನಾವಣೆಗೆ ಒಟ್ಟು 22 ಅಭ್ಯರ್ಥಿಗಳು ಸಲ್ಲಿಸಿದ್ದ 33 ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರಗಳನ್ನು ಹಿಂಪಡೆಯಲು ಮೇ.2 ಕೊನೆಯ ದಿನವಾಗಿದೆ. ಬಳಿಕಸ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ? ಎಂಬುದು ಅಂತಿಮವಾಗಲಿದೆ.
ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡ, ಕಾಂಗ್ರೆಸ್‌ನಿಂದ ಕುಸುಮಾ ಶಿವಳ್ಳಿ ಅವರು ಅಭ್ಯರ್ಥಿಗಳು. ಮೇ 19ರಂದು ಕುಂದಗೋಳ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಎಸ್.ಶಿವಳ್ಳಿ ಅವರು ಕುಂದಗೋಳ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಹೃದಯಾಘಾತದಿಂದಾಗಿ ಅವರು ಮೃತಪಟ್ಟ ಕಾರಣದಿಂದಾಗಿ ಉಪ ಚುನಾವಣೆ ಎದುರಾಗಿದೆ.












Click it and Unblock the Notifications