ಕುಂದಗೋಳ ಉಪ ಚುನಾವಣೆ : 1611 ಮತದ ಅಂತದಲ್ಲಿ ಕುಸುಮಾ ಶಿವಳ್ಳಿ ಜಯ
ಧಾರವಾಡ, ಮೇ 23 : ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು 1611 ಮತಗಳ ಅಂತರದಿಂದ ಜಯಗಳಿಸಿದರು. ಲೋಕಸಭಾ ಚುನಾವಣೆ ಹೀನಾಯ ಸೋಲಿನ ಕಹಿಯನ್ನು ಮೈತ್ರಿಕೂಟಕ್ಕೆ ಉಪ ಚುನಾವಣೆ ಗೆಲುವು ಸ್ವಲ್ಪ ಕಡಿಮೆ ಮಾಡಿದೆ.
ಗುರುವಾರ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಮತ ಎಣಿಕೆ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು 77,587 ಮತಗಳನ್ನು ಪಡೆದು ಜಯಗಳಿಸಿದರು. ಕುಂದಗೋಳ ಚುನಾವಣೆಯನ್ನು ಬಿಜೆಪಿ ಮತ್ತು ಮೈತ್ರಿಕೂಟ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು.
ಕುಂದಗೋಳದಲ್ಲಿ ಎಸ್.ಐ.ಚಿಕ್ಕನಗೌಡರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. 75,976 ಮತಗಳನ್ನು ಪಡೆದು ಅವರು ಸೋಲು ಅನುಭವಿಸಿದರು. 2018ರ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಅವರು, ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಸಿ.ಎಸ್.ಶಿವಳ್ಳಿ ಅವರು ಹೃದಯಾಘಾತದಿಂದ ನಿಧನರಾದ ಕಾರಣ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಅನುಕಂಪದ ಅಲೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ....

ಕುಸುಮಾ ಶಿವಳ್ಳಿ ಗೆಲುವು
ಸಿ.ಎಸ್.ಶಿವಳ್ಳಿ ಅವರ ನಿಧನದ ಅನುಕಂಪ ಕುಂದಗೋಳ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಕುಸುಮಾ ಶಿವಳ್ಳಿ ಅವರು ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದರು. ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು.

ಡಿ.ಕೆ.ಶಿವಕುಮಾರ್ ತಂತ್ರಗಳು
ಕುಂದಗೋಳ ಕ್ಷೇತ್ರಕ್ಕೆ ಜಪಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಉಸ್ತುವಾರಿಯಾಗಿದ್ದರು. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಓಡಾಟ ನಡೆಸಿ ಪ್ರಚಾರ ಮಾಡಿದ್ದರು. ಗೆಲುವಿಗಾಗಿ ಹಲವು ತಂತ್ರಗಳನ್ನು ಹಣೆದಿದ್ದರು. ಕುಸುಮಾ ಶಿವಳ್ಳಿ ಅವರ ಗೆಲುವಿನಲ್ಲಿ ಇದು ಸಹ ಪ್ರಮುಖ ಪಾತ್ರ ವಹಿಸಿದೆ.

ಮತ್ತೆ ಸೋತ ಚಿಕ್ಕನಗೌಡರ್
2008ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಬಿಜೆಪಿಯ ಎಸ್.ಐ.ಚಿಕ್ಕನಗೌಡರ್ ಅವರು ನಂತರ ಎರಡು ಚುನಾವಣೆಯಲ್ಲಿ ಸೋತಿದ್ದರು. 2018ರ ಚುನಾವಣೆಯಲ್ಲಿ 634 ಮತಗಳ ಅಂತರದಿಂದ ಸೋತಿದ್ದ ಅವರು, ಈ ಬಾರಿ ಪುನಃ ಸೋಲು ಕಂಡಿದ್ದಾರೆ.

ಮೈತ್ರಿಕೂಟಕ್ಕೆ ಜಯ
ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದು ಕುಸುಮಾ ಶಿವಳ್ಳಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಂಡಾಯ ಅಭ್ಯರ್ಥಿಗಳಾಗಿ 8ಕ್ಕೂ ಅಧಿಕ ಜನರು ನಾಮಪತ್ರ ಸಲ್ಲಿಸಿದ್ದರು. ಸಚಿವ ಜಮೀರ್ ಅಹಮದ್ ಖಾನ್ ಎಲ್ಲರ ಜೊತೆ ಮಾತುಕತೆ ನಡೆಸಿ, ನಾಮಪತ್ರ ವಾಪಸ್ ಪಡೆಸಿದ್ದರು.

ಯಾರಿಗೆ ಎಷ್ಟು ಮತ?
* ಕುಸುಮಾ ಶಿವಳ್ಳಿ 77, 587 (ಗೆಲುವು)
* ಎಸ್.ಐ.ಚಿಕ್ಕನಗೌಡರ್ 75,976
* ಗೆಲುವಿನ ಅಂತರ 1611












Click it and Unblock the Notifications