ಜಗದೀಶ್ ಶೆಟ್ಟರ್ ಗೆದ್ದೇ ಗೆಲ್ತಾರೆಂದು ರಕ್ತದಲ್ಲಿ ಪತ್ರ ಬರೆದ ಯುವಕ ನೈತಿಕ ಹೊಣೆಹೊತ್ತು ರಾಜೀನಾಮೆ
ಹುಬ್ಬಳ್ಳಿ, ಮೇ 14: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೋಲು ಹಿನ್ನೆಲೆಯಲ್ಲಿ, ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪೋಸ್ಟರ್ ಬರೆದಿದ್ದ ಯುವಕ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದಾರೆ.
ಮಂಜುನಾಥ ಎಂಬ ಯುವಕ ಜಗದೀಶ್ ಶೆಟ್ಟರ್ ಈ ಬಾರಿ ಗೆದ್ದೇ ಗೆಲ್ತಾರೆಂದು ರಕ್ತದಿಂದ ಬರೆದಿದ್ದ, ಸದ್ಯ ಜಗದೀಶ್ ಶೆಟ್ಟರ್ ಸೋಲಿನಿಂದಾಗಿ, ಈಗ ಮಂಜುನಾಥ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ, ಜಗದೀಶ್ ಶೆಟ್ಟರ್ ಗೆದ್ದೇ ಗೆಲ್ತಾರೆ ಅಂತ ರಕ್ತದಲ್ಲಿ ಬರೆದಿದ್ದ ಮಂಜುನಾಥ್ ಫಲಿತಾಂಶದ ಬಳಿಕ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು ಮನಸ್ಸಿಗೆ ಬಹಳ ಖುಷಿಯಾಗಿದೆ. ಜನರ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಮಾಜಿ ಮುಖ್ಯಮಂತ್ರಿಗಳು ಜಗದೀಶ್ ಶೆಟ್ಟರ್ ಮತ್ತು ಕುಂದುಗೊಳ ಅಭ್ಯರ್ಥಿ ಕುಸುಮತಿ ಶಿವಳ್ಳಿ ಅವರು ಸೋತಿದ್ದಾರೆ. ಈ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ಕೊಡುತ್ತಿದ್ದೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಧಾರವಾಡ-ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಜಗದೀಶ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ್ದ ಮಹೇಶ ಟೆಂಗಿನಕಾಯಿ, ನಮ್ಮ ಗುರುಗಳಾದ ಜಗದೀಶ ಶೆಟ್ಟರ್ ಅವರು ಈ ಬಾರಿ ಅವರ ಶಿಷ್ಯನಾದ ನನಗೆ ಆಶೀರ್ವಾದ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾನೆ. ಇದು ನನ್ನ ಗೆಲುವಲ್ಲ. ಇದು ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ ಗೆಲುವು ಎಂದಿದ್ದರು.












Click it and Unblock the Notifications