ಧಾರವಾಡ ಡಾಬಾದಲ್ಲಿ ಕಾರ್ಮಿಕನಿಗೆ ಸರಪಳಿ ಹಾಕಿದ ಮಾಲೀಕರು: ಅಸಲಿಗೆ ಆಗಿದ್ದೇನು..?
ಧಾರವಾಡ, ನವೆಂಬರ್ 30: ಧಾರವಾಡ ಹಾಗೂ ಚನ್ನಮ್ಮನ ಕಿತ್ತೂರ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಓಲ್ಡ್ ಮುಲ್ಲಾ ಡಾಬಾದಲ್ಲಿ ಕಾರ್ಮಿಕನೊಬ್ಬನಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಓಲ್ಡ್ ಮುಲ್ಲಾ ಡಾಬಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಸಿಪಿಐ ಸಮೀರ್ ಮುಲ್ಲಾ, ಗರಗ ಠಾಣೆ ಪಿಎಸ್‌ಐ ಸಿದ್ರಾಮಪ್ಪ ಉಣ್ಣದ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರ ಪ್ರದೇಶ ಮೂಲದ ಅರುಣ ಕುಮಾರ್ ಯಾದವ್ ಎಂಬಾತ ತನ್ನ ಕುಟುಂಬ ಸಮೇತ ಧಾರವಾಡದ ಓಲ್ಡ್ ಮುಲ್ಲಾ ಡಾಬಾಕ್ಕೆ ಕೆಲಸಕ್ಕೆಂದು ಬಂದಿದ್ದ. ಆತನಿಗೆ ಕಿರಣ್ ಎಂಬ ಓರ್ವ ಮಗನಿದ್ದು, ಆತನಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಕಿರಣ್ ತಂದೆ ಅರುಣ ಕುಮಾರ್, ಈ ಓಲ್ಡ್ ಮುಲ್ಲಾ ಡಾಬಾದಲ್ಲಿ ನಾನು ಅಡಿಗೆ ಭಟ್ಟನ ಕೆಲಸ ಮಾಡುತ್ತಿದ್ದೇನೆ. ನನ್ನ ಮಗ ಏಳು ವರ್ಷದಿಂದ ನನ್ನ ಜೊತೆಯೇ ಇದ್ದಾನೆ. ಆತನ ಬುದ್ಧಿ ಸರಿ ಇಲ್ಲ.

ಆತ ಮಾನಸಿಕ ಅಸ್ವಸ್ಥ. ಈ ಹಿಂದೆ ಅಪಘಾತದಲ್ಲಿ ಆತನ ತಲೆಗೆ ಪೆಟ್ಟಾಗಿತ್ತು. ಆಗಿನಿಂದ ಆತನಿಗೆ ಬುದ್ಧಿಭ್ರಮಣೆಯಾಗಿದೆ. ಆತ ಮನೆ ಬಿಟ್ಟು ಹೊರಟು ಹೋಗುತ್ತಾನೆ. ಆತನನ್ನು ಹುಡುಕುವುದೇ ಕಷ್ಟವಾಗುತ್ತದೆ. ಕಳೆದ ಮೂರು ದಿನದಿಂದ ನಾನು ಡಾಬಾದಲ್ಲಿ ಇರಲಿಲ್ಲ. ಮಗ ಕಿರಣ್ ಮಾತ್ರ ಇದ್ದ. ಆತ ಎಲ್ಲಿಯೂ ಹೋಗದಂತೆ ಆ ರೀತಿ ಹಿಡಿದಿಟ್ಟುಕೊಂಡಿರಬಹುದು. ಇದರಲ್ಲಿ ಬೇರೆ ಏನೂ ಉದ್ದೇಶವಿಲ್ಲ ಎಂದಿದ್ದಾನೆ.
ಕಿರಣ್ ಕೂಡ ಇದೇ ಡಾಬಾದಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸ ಮಾಡುತ್ತಿದ್ದ. ಆದರೆ, ಆತ ಮಾನಸಿಕ ಅಸ್ವಸ್ಥ ಇರುವ ಕಾರಣ ಆ ರೀತಿ ಮಾಡಲಾಗಿದೆ. ಆತನನ್ನು ಪೊಲೀಸರು ವಿಚಾರಣೆ ಮಾಡಬಹುದು. ಅವರ ತಂದೆ, ತಾಯಿ ಹೇಳಿದ ನಂತರವೇ ಆತನನ್ನು ಇಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದೇವೆ. ಅತ ಎಲ್ಲೆಲ್ಲೋ ಹೋಗುವ ಕಾರಣಕ್ಕೆ ಚೈನ್ ಹಾಕಿ ಕೂಡಿಟ್ಟುಕೊಳ್ಳಿ ಎಂದು ಅವರ ಪಾಲಕರು ಹೇಳಿದ ನಂತರವೂ ನಾವು ಆ ರೀತಿ ಮಾಡಿಲ್ಲ ಎಂದು ಮುಲ್ಲಾ ಡಾಬಾ ಮಾಲೀಕರಾದ ತೈಪುರ ಉಡಿಕೇರಿ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಎಲ್ಲದರ ಬಗ್ಗೆ ಪರಿಶೀಲನೆ ಮಾಡಿರುವ ಎಸ್‌ಪಿ ಬ್ಯಾಕೋಡ ಅವರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಅವರು ಯಾವ ರೀತಿ ದೂರು ಕೊಡುತ್ತಾರೋ ನೋಡೋಣ. ಡಾಬಾ ಮಾಲೀಕರು ಮತ್ತು ಅರುಣ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಕಿರಣ್ ಮಾನಸಿಕ ಅಸ್ವಸ್ಥ ಹೌದೋ ಇಲ್ಲವೋ ಪರಿಶೀಲನೆ ಮಾಡುತ್ತೇವೆ. ಮುಂದಿನ ಕ್ರಮದ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದಿದ್ದಾರೆ.












Click it and Unblock the Notifications