ಸಂತೋಷ್ ಲಾಡ್ ಸ್ವಕ್ಷೇತ್ರದಲ್ಲಿಯೇ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ: ಬಿಜೆಪಿಗೆ ಬಹುಮತ, ಲಾಡ್‌ಗೆ ಕಂಟಕ?
ಹುಬ್ಬಳ್ಳಿ, ಜೂನ್ 05: ಲೋಕಸಭಾ ಚುನಾವಣೆ ಘೋಷಣೆ ಬಳಿಕ ಧಾರವಾಡ ಕ್ಷೇತ್ರದ ತುಂಬೆಲ್ಲ ಅಬ್ಬರಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಸ್ವಕ್ಷೇತ್ರ ಕಲಘಟಗಿಯಲ್ಲೇ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಆಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇದು ಸಚಿವರ ಮೇಲೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಚುನಾವಣೆ ಉದ್ದೇಶಿಸಿ ಮಾತನಾಡುವ ಕೇಂದ್ರ ಸರ್ಕಾರ, ಬಿಜೆಪಿ ಅಭಿವೃದ್ಧಿ, ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವ ಸಂತೋಷ್ ಲಾಡ್ ಅವರ ಭಾಷಣ, ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದವು. ಇಲ್ಲಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಗೆ ಬಹುಮತ ಸಿಗಲಿದೆ ಎಂದು ಊಹಿಸಲಾಗಿತ್ತು.

ಸಚಿವರ ಸಂತೋಷ್ ಲಾಡ್ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾರೆ. ಧಾರವಾಡದಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ವಿಶೇಷವೆಂದರೆ ಸಚಿವರ ಸ್ವಕ್ಷೇತ್ರವಾದ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ 96,402 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಕೇವಲ 63,665 ಮತಗಳ ಪಡೆದಿದ್ದಾರೆ.
ರಾಜಕೀಯ ಹೊಂದಾಣಿಕೆ ಮಾಡಿಕೊಂಡ್ರಾ ಲಾಡ್?
ಕೇಂದ್ರ ಸರ್ಕಾರ ಅಭಿವೃದ್ಧಿಯೇ ಮಾಡಿಲ್ಲ. ಕೇವಲ ಪ್ರಚಾರ ಎನ್ನುತ್ತಿದ್ದ ಸಂತೋಷ್ ಲಾಡ್ ಅವರ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಅವರು ಬಿಜೆಪಿ ಜೊತೆಗೆ ಒಳ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಸ್ವಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಲಾಡ್ ಪ್ರತಿಸ್ಪರ್ಧಿ ಬಿಜೆಪಿಯ ನಾಗರಾಜ ಛಬ್ಬಿ ವಿರುದ್ಧ 14,357 ಮತಗಳ ಅಂತರದಿಂದ ಗೆದಿದ್ದರು. ಅದಾಗಿ ಒಂದೇ ವರ್ಷ ಅವಧಿಯಲ್ಲಿ ಸ್ವಕ್ಷೇತ್ರದಲ್ಲಿ ಸಚಿವರಿಗೂ ಭಾರೀ ಹಿನ್ನಡೆ ಆಗಿದೆ.

ಜೋಶಿ ಬಗ್ಗೆ ಮಾತಿಲ್ಲ, ಪ್ರಧಾನಿ ಮೋದಿ ಟಾರ್ಗೆಟ್?
ಚುನಾವಣೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುತ್ತ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮಾತ್ರ ಟಾರ್ಗೆಟ್ ಮಾಡಿ ಮಾತನಾಡಿದ್ದರು. ಜೊತೆಗೆ ಪ್ರಹ್ಲಾದ್ ಜೋಶಿಯವರ ಬಗ್ಗೆ ಹೆಚ್ಚು ಮಾತನಾಡದೇ, ಸ್ಥಳೀಯ ಅಭಿವೃದ್ಧಿ ವಿಚಾರಗಳು ಮಾತನಾಡಿರಲಿಲ್ಲ. ಹೀಗಾಗಿ ಅವರ ಮೇಲೆ ಹೊಂದಾಣಿಕೆ ರಾಜಕಾರಣದ ಆರೋಪ ಕೇಳಿ ಬಂದಿವೆ. ಮುಂದೆ ಕಾಂಗ್ರೆಸ್‌ನಲ್ಲಿ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಇವೆ.
ಮಾಧ್ಯಮಗಳ ಮುಂದೆ ತಮ್ಮನ್ನು ಸಮರ್ಥಿಸಿಕೊಂಡು ಬಹಿರಂಗ ಚರ್ಚೆಗೆ ಅವರು ಬಿಜೆಪಿಯನ್ನು ಆಹ್ವಾನಿಸುತ್ತಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಸಂತೋಷ್ ಲಾಡ್‌ರ ಆಯ್ಕೆ ಆಗಿದ್ದರು. ಅಸೂಟಿ ಸೋಲು ಒಂದೆಡೆಯಾದರೆ, ಸ್ವಕ್ಷೇತ್ರದಲ್ಲಿ ಬಿಜೆಪಿ 32,737 ಮತಗಳ ಮುನ್ನಡೆ ಸಾಧಿಸಿದೆ. ಇದು ಸಚಿವರಿಗಾದ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ಲಾಡ್ ಅವರ ಹಿಂಬಾಲಕರು ಬಿಜೆಪಿ ನಾಯಕರ ಜೊತೆಗೆ ಪರೋಕ್ಷವಾಗಿ ಸಂಪರ್ಕದಲ್ಲಿದ್ದರು ಅಂತಲೂ ಹೇಳಲಾಗುತ್ತಿದೆ.
ಪಕ್ಷ ತೀರ್ಮಾನಿಸಿದರೆ ಸಚಿವ ಲಾಡ್‌ಗೆ ಸಂಕಷ್ಟ
ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿರುವುದಲ್ಲದೇ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಕಲಘಟಗಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಧಕ್ಕಿವೆ. ಇದರಿಂದಾಗಿ ಸಂತೋಷ್ ಲಾಡ್ ಅವರ ನಿಲುವು ಏನು ಎಂದು ಗೊತ್ತಾಗಬೇಕಿದೆ. ಒಂದು ಪಕ್ಷ ನುಡಿದಂತೆ ನಡೆದರೆ, ಲಾಡ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications