ಧಾರವಾಡ: ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ, ಗುತ್ತಿಗೆದಾರರಿಗೆ 93 ಲಕ್ಷ ರೂ ದಂಡ
ಹುಬ್ಬಳ್ಳಿ, ಆಗಸ್ಟ್ 31: ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕೈಗೆತ್ತಿಗೊಂಡ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಾದ ವಿಳಂಬಕ್ಕೆ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯು ಇಲ್ಲಿಯವರೆಗೆ ಗುತ್ತಿಗೆದಾರರಿಂದ 93,04,220 ರೂ. ದಂಡ ವಸೂಲಿ ಮಾಡಿದೆ.
ಹುಬ್ಬಳ್ಳಿಯಲ್ಲಿ 2017ರಿಂದ ಅನುಷ್ಠಾನದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ 57 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 6 ಕಾಮಗಾರಿಗಳು ಪ್ರಗತಿಯಲ್ಲಿವೆ. ಅನುಷ್ಠಾನದ ವಿವಿಧ ಹಂತಗಳನ್ನು ನಿಗದಿತ ಅವಧಿಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಲಾಗಿದೆ. ಈ ಕಾರಣಕ್ಕೆ ಕೆಲವೊಂದು ಕಾಮಗಾರಿಗಳ ಗುತ್ತಿಗೆದಾರರು 3-4 ಬಾರಿ ದಂಡಕ್ಕೆ ಗುರಿಯಾಗಿದ್ದಾರೆ.

ಉದ್ಘಾಟನೆ ದಿನವೇ ಹಳಿ ತಪ್ಪಿದ ಹುಬ್ಬಳ್ಳಿ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಅಳವಡಿಸಿದ್ದ ಟಾಯ್ ಟ್ರೇನ್ಪ್ರಾಜೆಕ್ಟ್ಗೆ ಅತಿ ಹೆಚ್ಚು 15.54 ಲಕ್ಷ ರೂ. ದಂಡ ವಿಧಿಸಲಾಗಿದೆ. 4.20 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು 2022ರ ಏಪ್ರಿಲ್ನಲ್ಲಿ ಪೂರ್ಣಗೊಳಿಸಲಾಗಿತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೆ ಟ್ರೇನ್ ಓಡಿಲ್ಲ.
40 ಕೋಟಿ ರೂ. ವೆಚ್ಚದ ಹಳೇ ಬಸ್ ನಿಲ್ದಾಣ ನವೀಕರಣ ಕಾಮಗಾರಿಯು 2022ರ ಅಕ್ಟೋಬರ್ನಲ್ಲಿ ಪೂರ್ಣವಾಗಬೇಕಿತ್ತು. ಆದರೆ, ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಎರಡು ಬಾರಿ ಅವಧಿ ವಿಸ್ತರಣೆ ಮಾಡಲಾಗಿದ್ದು, ಗುತ್ತಿಗೆದಾರರಿಂದ 13.57 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಉಣಕರೆ ಕೆರೆ ಅಭಿವೃದ್ಧಿ 1ನೇ ಹಂತ 9.70 ಲಕ್ಷ ರೂ. ಹಾಗೂ 2ನೇ ಹಂತ 7.48 ಲಕ್ಷ ರೂ., ಸ್ಮಾರ್ಟ್ ರೋಡ್ ಪ್ಯಾಕೇಜ್-3 ಕಾಮಗಾರಿಯು 6.83 ಲಕ್ಷ ರೂ., ಬಿಎಸ್ಯುುಪಿ ಪ್ಯಾಕೇಜ್ 2 ಕಾಮಗಾರಿಯು 5.39 ಲಕ್ಷ ರೂ., ನೆಹರು ಮೈದಾನ ನವೀಕರಣ 4.81 ಲಕ್ಷ ರೂ., ಚಿಟಗುಪ್ಪಿ ಆಸ್ಪತ್ರೆ ಉನ್ನತೀಕರಣ 1.89 ಲಕ್ಷ ರೂ. ದಂಡಕ್ಕೆ ಗುರಿಯಾಗಿದೆ.
'ಯಾವುದೇ ಪ್ರಾಜೆಕ್ಟ್ನಲ್ಲಿ ಕಾಮಗಾರಿಯ ವಿವಿಧ ಹಂತಗಳು (1ರಿಂದ 10ರವರೆಗೆ) ಇರುತ್ತವೆ. ಅವುಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಹಾಗೇ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡಿದ ಗುತ್ತಿಗೆದಾರರಿಗೆ ದಂಡ ವಿಧಿಸಲು ಅವಕಾಶವಿದೆ. ಅದರಂತೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯು ಇಲ್ಲಿಯವರೆಗೆ ಗುತ್ತಿಗೆದಾರರಿಂದ 93,04,220 ರೂ. ದಂಡ ವಸೂಲಿ ಮಾಡಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆಯ ಉನ್ನತೀಕರಣ, ಉಣಕಲ್ ಕೆರೆ 2ನೇ ಹಂತ, ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ನವೀಕರಣ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ವಣ, ಸ್ಮಾರ್ಟ್ ರ್ಪಾಂಗ್ ಟಾವರ್ (ಮಲ್ಟಿ ಲೆವಲ್ ಕಾರ್ ರ್ಪಾಂಗ್) ಹಾಗೂ ಕಮರಿಪೇಟೆ ಪೊಲೀಸ್ ಠಾಣೆಯಿಂದ ಉಣಕಲ್ ಕ್ರಾಸ್ವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 2024ರ ಜೂನ್ 30 ರೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕೆಂದು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಸಲಹಾ ಸಂಸ್ಥೆಗೆ 16.11 ಕೋಟಿ ರೂ. ಪಾವತಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯು ಯೋಜನಾ ನಿರ್ವಹಣೆ ಸಲಹೆಗಾರ (ಪಿಎಂಸಿ-ಪ್ರಾಜೆಕ್ಟ್ ಮ್ಯಾನೇಜ್ವೆುಂಟ್ ಕನ್ಸಲ್ಟಂಟ್)ರಿಗೆ 16.11 ಕೋಟಿ ರೂ. ಪಾವತಿಸಿದೆ. ಪ್ರೖೆಸ್ ವಾಟರ್ ಕೂಪರ್ಸ್, ಟಾಟಾ ಕನ್ಸಲ್ಟನ್ಸಿ ಇಂಜಿನಿಯರಿಂಗ್ ಸರ್ವಿಸಸ್ ಮತ್ತು ಅಮ್ಮಿನಭಾವಿ ಆಂಡ್ ಹೆಗಡೆ ಕನ್ಸೊರ್ಟಿಯಮ್ ಸಂಸ್ಥೆಯು ಪಿಎಂಸಿ ಆಗಿವೆ. ಹು-ಧಾ ಸ್ಮಾರ್ಟ್ ಸಿಟಿಯ ಯೋಜನಾ ವೆಚ್ಚ 930 ಕೋಟಿ ರೂ. ಹಾಗೂ ಆಡಳಿತ ಮತ್ತು ಕಚೇರಿ ವೆಚ್ಚ 30 ಕೋಟಿ ರೂ. ಗಳಾಗಿವೆ. ಇಲ್ಲಿಯವರೆಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ 766 ಕೋಟಿ ರೂ ಪಾವತಿಸಲಾಗಿದೆ.












Click it and Unblock the Notifications