ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ
ಹುಬ್ಬಳ್ಳಿ, ಆಗಸ್ಟ್ 5 : ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ದೇಶದ ಐದು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 141.44 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಸಹಾಯಕ ವಿಮಾನಯಾನ ಸಚಿವ ಮಹೇಶ್ ಶರ್ಮಾ ಅವರು ಲೋಕಸಭೆಗೆ ಮಂಗಳವಾರ ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ. ದೇಶದಲ್ಲಿ ವಿಮಾನ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಐದು ಸಣ್ಣ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. [ಹುಬ್ಬಳ್ಳಿಗೆ ಹಾರಲಿವೆ ಇನ್ನೂ ಮೂರು ವಿಮಾನ]

ಎರಡು ಹಾಗೂ ಮೂರನೇ ಹಂತದ ನಗರಗಳ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಹುಬ್ಬಳ್ಳಿ, ಬೆಳಗಾವಿ, ರಾಜಸ್ಥಾನದ ಕಿಶನ್ ಗಢ, ಒಡಿಸಾದ ಜಾರ್ಸುಗುಡ ಮತ್ತು ಅರುಣಾಚಲ ಪ್ರದೇಶದ ತೇಜು ನಗರಗಳನ್ನು ಗುರುತಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದರು. [ಹುಬ್ಬಳ್ಳಿಗೆ ಅಕ್ಟೋಬರ್ ತನಕ ಸ್ಪೈಸ್ ಜೆಟ್ ಹಾರಾಟವಿಲ್ಲ]
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 141.44 ಕೋಟಿ, ಬೆಳಗಾವಿಯಲ್ಲಿ 141.87 ಕೋಟಿ, ಕಿಶನ್ ಗಢದಲ್ಲಿ 160.05 ಕೋಟಿ, ಜಾರ್ಸುಗುಡದಲ್ಲಿ 200 ಕೋಟಿ ಮತ್ತು ತೇಜು ನಗರದಲ್ಲಿ 96 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಐದು ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ಅವುಗಳನ್ನು ಮುಗಿಸಲು ರಾಜ್ಯ ಸರ್ಕಾರದ ಸಹಕಾರ ಬೇಕಾಗಿದೆ. ಅಗತ್ಯ ಭೂಮಿ ದೊರಕಿಸುವುದು ಮುಂತಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ವಿದ್ಯುತ್, ನೀರು, ರಸ್ತೆ ಸಂಪರ್ಕಗಳನ್ನು ತ್ವರಿತವಾಗಿ ಸರ್ಕಾರ ಒದಗಿಸಬೇಕು ಎಂದರು.











Click it and Unblock the Notifications