ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಸ್ವಾಮೀಜಿ ವಾಪಸ್?
ಹುಬ್ಬಳ್ಳಿ, ಏ. 15 : ಉತ್ತರಾಧಿಕಾರಿ ವಿವಾದದಿಂದ ಬೇಸತ್ತು ಕುಮಾರೇಶ್ವರ ಮಠಕ್ಕೆ ತೆರಳಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮೂರುಸಾವಿರ ಮಠಕ್ಕೆ ವಾಪಸ್ ಆಗಲಿದ್ದಾರೆ. ಸ್ವಾಮೀಜಿಗಳನ್ನು ಸ್ವಾಗತಿಸಲು ನೂರಾರು ಭಕ್ತರು ಸಿದ್ಧವಾಗುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ನೇತೃತ್ವದ ಭಕ್ತರ ನಿಯೋಗವೊಂದು ಏ.16ರಂದು ಹಾನಗಲ್‌ನಲ್ಲಿರುವ ಕುಮಾರೇಶ್ವರ ಮಠಕ್ಕೆ ತೆರಳಲಿದ್ದು, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ವಾಪಸ್ ಕರೆತರಲಿದ್ದಾರೆ. [ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಏನಿದು ವಿವಾದ?]

ಏ.9ರಂದು ನಡೆದ ಸಭೆಯಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಮಠಕ್ಕೆ ವಾಪಸ್ ಕರೆತರಲು ನಿರ್ಧರಿಸಲಾಗಿದೆ. ಹಲವಾರು ಮಠಾಧೀಶರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಸಂಧಾನ ಸಭೆ ನಡೆಸಿದ್ದು, ಮಠಕ್ಕೆ ವಾಪಸ್ ಆಗುವಂತೆ ಮನವಿ ಮಾಡಿದ್ದಾರೆ. [ಮೂರು ಸಾವಿರ ಮಠದ ಉತ್ತರಾಧಿಕಾರಿ ಯಾರು?]
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ಮಠದ ಆವರಣಕ್ಕೆ ಕರೆತರಲು ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಸ್ವಾಮೀಜಿ, ಮುಂಡರಗಿಯ ಡಾ.ಅನ್ನದಾನೀಶ್ವರ ಸ್ವಾಮೀಜಿ, ಮುರುಘಾಮಠದ ಸಿದ್ಧಲಿಂಗ ಸ್ವಾಮೀಜಿ ಮುಂತಾದವರು ಗುರುವಾರ ಮಠಕ್ಕೆ ಆಗಮಿಸುವ ಸಾಧ್ಯತೆ ಇದೆ.
2014ರ ಅಕ್ಟೋಬರ್‌ನಲ್ಲಿ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಮುಂದಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಭಾರೀ ವಿವಾದ ಉಂಟಾಗಿತ್ತು. ಆದ್ದರಿಂದ ಸ್ವಾಮೀಜಿಗಳು ಕುಮಾರೇಶ್ವರ ಮಠಕ್ಕೆ ತೆರಳಿದ್ದರು. [ಚಿತ್ರ ಕೃಪೆ : ಸಂವಾದ.ಆರ್ಗ್]












Click it and Unblock the Notifications