ಹಾಸನದಲ್ಲಿ 100 ಎಕರೆ ಅರಣ್ಯ ಭೂಮಿ ಮರುಸ್ವಾಧೀನ; ಈ ಜಾಗದಲ್ಲಿ ಮುಂದಿನ ಪ್ಲ್ಯಾನ್ ಏನು?
ಹಾಸನ: ಕಳೆದೊಂದು ದಶಕದಿಂದಲೂ ಒತ್ತುವರಿಯಾಗಿದ್ದ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ 100 ಎಕರೆ ಅರಣ್ಯ ಭೂಮಿಯನ್ನು ಇಲಾಖೆ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾಹಿತಿ ನೀಡಿದ್ದಾರೆ. ಸದರಿ ಭೂಮಿಯಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಿದ್ದಾರೆ.
ಹಾಸನ ನಗರದ ಸಮೀಪದ ಶಾಂತಿಗ್ರಾಮ ಹೋಬಳಿಯ ಮಡೆನೂರಿನ ಸರ್ವೆ ನಂ. 298ರಲ್ಲಿರುವ 100 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದಿದೆ. ಸ್ಥಳೀಯ ಪ್ರಭೇದದ ಗಿಡಗಳನ್ನು ನೆಟ್ಟು ಹಸಿರು ನೆಡುತೋಪು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಅವರು ಹೇಳಿದ್ದಾರೆ.

ಶನಿವಾರದ ಬೇಲೂರು ಪ್ರವಾಸದ ವೇಳೆ ಕೃಷಿ ಸಂಶೋಧನಾ ಕೇಂದ್ರ ಹಾಗೂ ಜೈವಿಕ ಇಂಧನ ಘಟಕದ ಸಮೀಪದಲ್ಲಿರುವ ಈ ಅಮೂಲ್ಯ ಅರಣ್ಯ ಭೂಮಿಯನ್ನು ಸಚಿವರು ವೀಕ್ಷಿಸಿದ್ದರು. 2015-16ರಲ್ಲೇ ಅರಣ್ಯ ಇಲಾಖೆಯ ಹೆಸರಿಗೆ ಮ್ಯುಟೇಷನ್ ಮತ್ತು ಪಹಣಿ ಆಗಿದ್ದರೂ, ಈವರೆಗೆ ಸಮರ್ಪಕ ಅರಣ್ಯೀಕರಣ ಕೈಗೊಂಡಿಲ್ಲ ಎಂದು ಅವರು ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಕುರಿತು ವಿಷಾದ ವ್ಯಕ್ತಪಡಿಸಿದರು.
ಅರಣ್ಯ ಭೂಮಿ ಸಂರಕ್ಷಣೆಗೆ ಕ್ರಮ
2015ರ ನಂತರ ನಡೆದಿರುವ ಅರಣ್ಯ ಭೂಮಿ ಒತ್ತುವರಿಗಳನ್ನು ತೆರವುಗೊಳಿಸಲು ಹಾಗೂ ಖಾಲಿ ಇರುವ ಅರಣ್ಯ ಭೂಮಿಯನ್ನು ಬೇಲಿ ಹಾಕಿ ಸಂರಕ್ಷಿಸಲು ಕೂಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ಕಡೆ ಕರ್ನಾಟಕ ಅರಣ್ಯ ಕಾಯಿದೆಯ ಸೆಕ್ಷನ್ 64(A) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲಿನ ನಡುವೆ, ನಗರ ಪ್ರದೇಶಗಳ ಸಮೀಪದ ಅರಣ್ಯ ಭೂಮಿಗಳನ್ನು ಉಳಿಸಿ ಬೆಳೆಸುವುದು ಮುಂದಿನ ಪೀಳಿಗೆಯ ಉಸಿರಿಗಾಗಿ ಅತ್ಯಗತ್ಯ. ಪ್ರಕೃತಿ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅವರು ಒತ್ತಿ ಹೇಳಿದರು.
ಅರ್ಜುನ ಆನೆ 650ಕೆ.ಜಿ. ತೂಕದ ಪ್ರತಿಮೆ ಅನಾವರಣ
ಮೈಸೂರು ದಸರಾ ಆನೆಯಾದ ಮೃತ ಅರ್ಜುನ ಆನೆಯ ನೆನಪು ಜನಮಾನಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಅದರ ಸ್ಮರಣಾರ್ಥ ಯಸಳೂರಿನ ದಬ್ಬಳಿಕಟ್ಟೆ ನೆಡುತೋಪಿನಲ್ಲಿ ನಿರ್ಮಿಸಿರುವ ಅರ್ಜುನನ 650 ಕೆ.ಜಿ. ತೂಕದ ಸುಂದರ ಪ್ರತಿಮೆಯನ್ನು ಸಚಿವರು ಇತ್ತೀಚೆಗೆ ಉದ್ಘಾಟಿಸಿದ್ದರು.
8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ ನಡೆದು ನಾಡಿನ ಹೆಮ್ಮೆ ಆಗಿದ್ದ ಅರ್ಜುನ, ಅರಣ್ಯ ಇಲಾಖೆಯ ಅತ್ಯಂತ ನೆಚ್ಚಿನ ಆನೆಯಾಗಿತ್ತು. ಪುಂಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಅವನ ಪಾತ್ರ ಅಪಾರವಾಗಿತ್ತು. ಯಸಳೂರು ಸಮೀಪ ನಡೆದ ಕಾರ್ಯಾಚರಣೆಯ ವೇಳೆ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ತನ್ನ ಪ್ರಾಣ ತ್ಯಾಗ ಮಾಡಿದ ಅರ್ಜುನ ನಿಜವಾದ ಹುತಾತ್ಮ ಎಂದು ಆನೆ ಕಾರ್ಯ ಬಣ್ಣಿಸಿದರು.
ಮುಂದಿನ ಪೀಳಿಗೆಗೂ ಅರ್ಜುನನ ಯಶೋಗಾಥೆ ಪರಿಚಯವಾಗುವಂತೆ, ಅವನ ಕಾರ್ಯಾಚರಣೆಗಳ ಅಪರೂಪದ ಚಿತ್ರಗಳು ಹಾಗೂ ಮಾಹಿತಿಗಳನ್ನು ಸ್ಮಾರಕ ಪ್ರದೇಶದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಅರ್ಜುನನ ಸ್ಮಾರಕ ಸ್ಥಳಕ್ಕೆ ಪಕ್ಕಾ ರಸ್ತೆ ನಿರ್ಮಿಸುವ ಕೊಡುವ ಭರವಸೆ ನೀಡಿದರು.
ಹುತಾತ್ಮ ಅರ್ಜುನ ಆನೆಯ ನೆನಪು ಜನಮಾನಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಇಂದು ಯಸಳೂರಿನ ದಬ್ಬಳಿಕಟ್ಟೆ ನೆಡುತೋಪಿನಲ್ಲಿ ನಿರ್ಮಿಸಿರುವ ಅರ್ಜುನನ 650 ಕೆ.ಜಿ. ತೂಕದ ಸುಂದರ ಪ್ರತಿಮೆಯನ್ನು ಉದ್ಘಾಟಿಸಿ, ಅವನ ಸಾಹಸ, ನಿಷ್ಠೆ ಮತ್ತು ಸೇವೆಯನ್ನು ಸ್ಮರಿಸಲಾಯಿತು.🐘
— Eshwar Khandre (@eshwar_khandre) May 6, 2026
8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ… pic.twitter.com/1Clejbmboo














Click it and Unblock the Notifications