ನವೋದ್ಯಮಿಗಳಿಗೆ ಸಿಹಿ ಸುದ್ದಿ: ಉತ್ತರ ಕರ್ನಾಟಕದಲ್ಲಿ 'ಫ್ಲ್ಯಾಟ್ ಫ್ಯಾಕ್ಟರಿ' ಸ್ಥಾಪನೆ: ಕೈ ಶಾಸಕ
ಹುಬ್ಬಳ್ಳಿ, ಆಗಸ್ಟ್ 30: ಹೊಸದಾಗಿ ಉದ್ಯಮ ಪ್ರವೇಶಿಸುವ ನವೋದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ತಂತ್ರಜ್ಞಾನದಲ್ಲಿ ಮುಂದಿರುವ ಚೀನಾ ಮಾದರಿಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ 'ಫ್ಲ್ಯಾಟ್ ಫ್ಯಾಕ್ಟರಿ' ನಿರ್ಮಾಣ ಶೀಘ್ರವೇ ಮಾಡಿಕೊಡಲಿದೆ ಎಂದು ಶಾಸಕ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಕುಮಾರ ಬಚ್ಚೇಗೌಡ ಮಾಹಿತಿ ನೀಡಿದರು.
ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಬಿಯಾಂಡ್ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಟೆಕ್ಸಲರೇಶನ್- 2024 ಸಮಾವೇಶದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ 'ಫ್ಲ್ಯಾಟ್ ಫ್ಯಾಕ್ಟರಿ' ಅನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಎರಡು 2 ಎಕರೆ ಹಾಗೂ ಬೆಳಗಾವಿಯಲ್ಲಿ 5 ಎಕರೆ ಜಾಗ ಲಭ್ಯವಿದೆ ಎಂದು ತಿಳಿಸಿದರು.

ನವೋದ್ಯಮಿಗಳಿಗಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಈ ಫ್ಲ್ಯಾಟ್ ಫ್ಯಾಕ್ಟರಿಯು ಐದು ಅಂತಸ್ತಿನಲ್ಲಿರುತ್ತದೆ. ಇಲ್ಲಿ ಬ್ಯಾಟರಿ ಟೆಕ್ನಾಲಜಿ ಹಾಗೂ ಇಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆಂಡ್ ಮ್ಯಾನುಫ್ಯಾಕ್ಟರಿಂಗ್ (ಎಎಸ್ಟಿಎಂ) ಕ್ಲಸ್ಟರ್ ಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಈ ಯೋಜನೆ ಯಾವಾಗ ಆರಂಭ, ಅಂದಾಜು ವೆಚ್ಚ ಇನ್ನಿತರ ಮಾಹಿತಿಗಳನ್ನು ಮುಂದಿನ ತಿಂಗಳು ಬೆಳಗಾವಿ ನಡೆಯಲಿರುವ ಟೆಕ್ ಸಮ್ಮಿಟ್‌ನಲ್ಲಿ ಚರ್ಚಿಸಿ ನಂತರ ತಿಳಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ ಐಟಿ ಪಾರ್ಕ್ ಪುನರ್ ನವೀಕರಣ
ಸರ್ಕಾರದಿಂದ ಹುಬ್ಬಳ್ಳಿ ಐಟಿ ಪಾರ್ಕ್ ಅನ್ನು ಪುನರ್ ನವೀಕರಣ ಮಾಡಲು ಉದ್ದೇಶಿಸಲಾಗಿದೆ. ಇಲ್ಲಿ ವಿದ್ಯುತ್, ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸುಸಜ್ಜಿತವಾಗಿರುವಂತೆ ಮಾಡಲಾಗುವುದು. ಈಗಾಗಲೇ ಐಟಿ ಪಾರ್ಕ್ಗೆ ಭೇಟಿ ನೀಡಿ, ಕುಂದು ಕೊರತೆ ಆಲಿಸಲಾಗಿದೆ.
ಈ ಐಟಿ ಪಾರ್ಕ್ ಅನ್ನು 'ಗ್ಲೋಬಲ್ ಟೆಕ್ನಾಲಜಿ ಸೆಂಟರ್' ಮಾಡಿ ಇದಕ್ಕೆ ಹೊಸ ರೂಪ ನೀಡುವ ಚಿಂತನೆಯಲ್ಲಿದ್ದೇವೆ. ಅಲ್ಲದೇ ಇಲ್ಲಿ 2.5 ಲಕ್ಷ ಅಡಿ ಜಾಗದ ಸೂಕ್ತ ಸದ್ಬಳಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಈ ಯೋಜನೆಯು 'ಬಿಯಾಂಡ್ ಬೆಂಗಳೂರು' ಪರಿಕಲ್ಪನೆ ಆಧಾರದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಬಿಯಾಂಡ್ ಬೆಂಗಳೂರು ಕಲ್ಪನೆ ಸಾಕಾರಕ್ಕೆ ವಿವಿಧ ಐಟಿ ಕಂಪನಿಗಳು ಕೈ ಜೋಡಿಸಿವೆ. ಈವರೆಗೆ 30ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರಿನಾಚೆಗೆ ಬಂದಿವೆ. ಅಲ್ಲಿದ್ದುಕೊಂಡೆ ಕಂಪನಿಯಗಳು ಯಶಸ್ವಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ರಾಜ್ಯದ ಪ್ರತಿ ವಲಯವೂ ಅಭಿವೃದ್ಧಿಯಾಗಬೇಕು ಎಂಬ ಆಶಯ ನಮ್ಮದಾಗಿದೆ ಎಂದರು.
ಉ.ಕ ಭಾಗದ ತ್ರಿವಳಿ ನಗರ ಅಭಿವೃದ್ಧಿ
ಹುಬ್ಬಳ್ಳಿ ಧಾರವಾಡ ಬೆಳಗಾವಿ ಈ ಮೂರು ನಗರಗಳಲ್ಲಿ ತ್ರಿವಳಿ ನಗರಗಳು ಎಂದು ಕರೆದ ಶಾಸರಕು, ಇವುಗಳ ಅಭಿವೃದ್ಧಿ ದೃಷ್ಟಿಯಿಂದ ಇವುಗಳನ್ನು ವಿಶೇಷ ವಲಯಗಳಾಗಿ ಪರಿಗಣಿಸಲಾಗಿದೆ. ಈ ನಗರಗಳು ಉದ್ಯಮಶೀಲತೆ ಬೆಳೆಸಲು ಸೂಕ್ತವಾಗಿವೆ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆ, ಉದ್ಯಮ ಸ್ನೇಹಿ ವಾತಾವರಣ ಇದೆ. ಮುಂದಿನ ದಿನಗಳಲ್ಲಿ ಇಲ್ಲಿನ ಸಂಪನ್ಮೂಲ ಸದ್ಭಳಕೆ ಮಾಡಿಕೊಳ್ಳಲಾಗುವುದು.
ಕರ್ನಾಟಕದಲ್ಲಿ 3.7 ಲಕ್ಷ ಕೋಟಿ ರೂ. ಇಲೆಕ್ಟ್ರಾನಿಕ್ಸ್ ವಲಯದ ವಹಿವಾಟು ಇದ್ದು, ಇದನ್ನು 5 ಲಕ್ಷ ಕೋಟಿಗೆ ವೃದ್ಧಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಬಿಯಾಂಡ್ ಬೆಂಗಳೂರು ಪೂರಕವಾಗಲಿದೆ. ಅಗತ್ಯ ಎಲ್ಲ ಕ್ರಮ ಕೈಗೊಂಡು ಉದ್ಯಮ, ಕೈಗಾರಿಕೆಗೆ ಪೂರಕೆ ವಾತಾವರಣ ನಿರ್ಮಿಸಲಾಗುವುದು ಎಂದರು.
ಐಟಿ, ಬಿಟಿ ಇಲಾಖೆ ನಿರ್ದೇಶಕ ದರ್ಶನ್ ಎಚ್.ವಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಗುಪ್ತಾ, ಐಯೊನ್‌ಐಡಿಯಾ ಕಂಪನಿಯ ಬೃಂದಲಾ ಮಲ್ಲಪ್ಪ, ಟೆಟ್ರೊಲ್ವ ಸೆಮಿಕಂಡಕ್ಟರ್ ಅಧ್ಯಕ್ಷ ಡಾ. ವಿ. ವೀರಪ್ಪನ್, ಡಾ. ಪ್ರದಿಪ್ ಠಾಕರೆ, ವೆಂಕಟೇಶ ಪಾಟೀಲ ಪಾಲ್ಗೊಂಡಿದ್ದರು.












Click it and Unblock the Notifications