ಡಾ. ಚೆನ್ನವೀರ ಕಣವಿ ಹೆಸರಿನಲ್ಲಿ ಕವಿವಿಯಲ್ಲಿ ಚಿನ್ನದ ಪದಕ
ಧಾರವಾಡ, ಮಾರ್ಚ್ 29; ಕವಿ, ನಾಡೋಜ ದಿವಂಗತ ಡಾ. ಚೆನ್ನವೀರ ಕಣವಿ ನೆನಪಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‍ಡಿಎಂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕಗಳನ್ನು ಸ್ಥಾಪಿಸಲಾಗುವುದು ಎಂದು ಚೆನ್ನವೀರ ಕಣವಿ ಪುತ್ರಿ ಪ್ರಿಯದರ್ಶಿ ಕಣವಿ ಹೇಳಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 93 ವರ್ಷದ ಡಾ. ಚೆನ್ನವೀರ ಕಣವಿ ಚಿಕಿತ್ಸೆ ಫಲಕಾರಿಯಾಗದೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಫೆಬ್ರವರಿ 16ರಂದು ಮೃತಪಟ್ಟಿದ್ದರು. ಸರ್ಕಾರ ಅವರ ಚಿಕಿತ್ಸಾ ವೆಚ್ಚ ಭರಿಸಿದ ಕಾರಣ ಕುಟುಂಬವು ಭರಿಸಲು ಸಿದ್ಧವಿದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಕರ್ನಾಟಕ ವಿವಿ ಹಾಗೂ ಎಸ್‍ಡಿಎಂ ಡೀಮ್ಡ್ ವಿವಿಯಲ್ಲಿ ನಿಧಿ ಸ್ಥಾಪನೆ ಮಾಡಿ, ವಿದ್ಯಾರ್ಥಿಗಳಿಗೆ ಸ್ವರ್ಣಪದಕಗಳನ್ನು ನೀಡಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.

ಡಾ. ಚನ್ನವೀರ ಕಣವಿ ಅವರ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಅವರಿಗಾಗಿ ಮಿಡಿದ ನಾಡಿನ ಸಮಸ್ತ ಜನತೆಗೆ, ಮಾಧ್ಯಮಗಳಿಗೆ, ಮಠಾಧೀಶರಿಗೆ ಕೃತಜ್ಞತೆಗಳನ್ನು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಡಾ. ಚೆನ್ನವೀರ ಕಣವಿ ಅನಾರೋಗ್ಯದ ಕಾರಣ ಜನವರಿ 14 ರಿಂದ ಫೆಬ್ರವರಿ 16ರ ವರೆಗೆ ಧಾರವಾಡದ ಎಸ್‍ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನಲೆಯಲ್ಲಿ ಎಸ್‍ಡಿಎಂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕಗಳನ್ನು ಸ್ಥಾಪಿಸಲಾಗುತ್ತಿದೆ.
ಡಾ. ಚೆನ್ನವೀರ ಕಣವಿ ಅವರು ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಎಸ್‍ಡಿಎಂ ಆಸ್ಪತ್ರೆಯ ನಿರ್ದೇಶಕರು, ವೈದ್ಯರು, ಸಿಬ್ಬಂದಿ ನೀಡಿದ ಸಹಕಾರ, ತುಂಬಿದ ನೈತಿಕ ಸ್ಥೈರ್ಯಕ್ಕೆ ಕುಟುಂಬ ಚೆನ್ನವೀರ ಕಣವಿ ಕುಟುಂಬ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.
ಚೆನ್ನವೀರ ಕಣವಿ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಘೋಷಿಸಿದ್ದರಿಂದ, ಅದಕ್ಕಾಗಿ ಕುಟುಂಬವು ಭರಿಸಲು ಸಿದ್ಧವಿದ್ದ ಹಣವನ್ನು ಸಾಮಾಜಿ ಕಾರ್ಯಕ್ಕೆ ವಿನಿಯೋಗ ಮಾಡಲು ಉದ್ದೇಶಿಸಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದರು.
ಚೆನ್ನವೀರ ಕಣವಿ ಅವರು ಆಸ್ಪತ್ರೆಗೆ ದಾಖಲಾದಾಗಲೇ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂಬ ಬೇಡಿಕೆ ಇತ್ತು. ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ಘೋಷಣೆ ಮಾಡಿದ್ದರು.
ಫೆಬ್ರವರಿ 16ರಂದು ನಿಧನ; ಡಾ. ಚೆನ್ನವೀರ ಕಣವಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆ ಬಳಿಕ ಅವರು ಕೋವಿಡ್‌ನಿಂದ ಗುಣಮುಖರಾದರೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು.
ಅವರಿಗೆ ಶ್ವಾಸಕೋಶದ ಸೋಂಕು ಕಡಿಮೆಯಾಗಿರಲಿಲ್ಲ. ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 16ರಂದು ಅವರು ವಿಧಿವಶರಾಗಿದ್ದರು.
ಎಸ್‍ಡಿಎಂ ಆಸ್ಪತ್ರೆಯಿಂದ ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರವನ್ನು ಕಲ್ಯಾಣ ನಗರದ ನಿವಾಸಕ್ಕೆ ತರಲಾಗಿತ್ತು. ಬಳಿಕ ಕರ್ನಾಟಕ ಕಾಲೇಜು ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಧಾರವಾಡ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಫೆಬ್ರವರಿ 16ರ ಸಂಜೆ ಕೆಲಗೇರಿ ಸಮೀಪದ 'ಸೃಷ್ಠಿ' ತೋಟದಲ್ಲಿ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರು, ಶಾಸಕರು, ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications