ಹುಬ್ಬಳ್ಳಿಯಲ್ಲಿ ಸಿಬಿಐ ಅಧಿಕಾರಿ ಹಣ, ಕಾರಿನೊಂದಿಗೆ ಪರಾರಿ
ಹುಬ್ಬಳ್ಳಿ, ಸೆ. 30 : ಹುಬ್ಬಳ್ಳಿಯ ಕಾಲೇಜಿನ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿ ಐದು ಸಾವಿರ ರೂ ಹಣ ಮತ್ತು ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿಬಿಐ ಅಧಿಕಾರಿ ಎಂದು ನಕಲಿ ಕಾರ್ಡ್ ತೋರಿಸಿರುವ ಈತ ಪೊಲೀಸ್ ಠಾಣೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಕಾಲೇಜಿನಿಂದ ಪರಾರಿಯಾಗಿದ್ದಾನೆ.
ಗಂಗಾಧರ ನಗರದಲ್ಲಿರುವ ಅಂಬೇಡ್ಕರ್ ಕಾಲೇಜಿಗೆ ಶನಿವಾರ ಆಗಮಿಸಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿರುವುದಾಗಿ ಪ್ರಾಂಶುಪಾಲರಿಗೆ ಹೇಳಿದ್ದಾನೆ.

ಈ ಬಗ್ಗೆ ನಿಮಗೆ ಮಾಹಿತಿ ಇದ್ದರೆ ತಿಳಿಸಿ ಇಲ್ಲವಾದಲ್ಲಿ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಪ್ರಾಂಶುಪಾಲರಿಗೆ ಬೆದರಿಸಿದ್ದಾನೆ. ದಾಳಿ ಹೆಸರಿನಲ್ಲಿ ಪ್ರಾಂಶುಪಾಲರ ಕಚೇರಿಯಲ್ಲಿ ಸಿಕ್ಕಿದ ಐದು ಸಾವಿರ ಹಣವನ್ನು ಪಡೆದಿದ್ದಾನೆ. [ಬಾಣಸವಾಡಿ : ನಕಲಿ ಪೊಲೀಸ್ ಅಂದರ್!]
ಬಳಿಕ ಕಾರ್ಯದರ್ಶಿಯವರ ಕಾರು ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಬರುತ್ತೇನೆ ಎಂದು ಹೇಳಿದ ಅಲ್ಲಿಂದ ಪರಾರಿಯಾಗಿದ್ದಾನೆ. ಎಷ್ಟು ಹೊತ್ತಾದರೂ ಸಿಬಿಐ ಅಧಿಕಾರಿ ವಾಪಸ್ ಬರದ ಕಾರಣ ಕಾಲೇಜಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಆತ ನಕಲಿ ವ್ಯಕ್ತಿ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಕುರಿತು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ಪರಾರಿಯಾಗಿರುವ ಕಾರು ಸುಮಾರು 11 ಲಕ್ಷ ಬೆಲೆಬಾಳುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಕಾರು ಮತ್ತು 5 ಸಾವಿರ ಹಣದೊಂದಿಗೆ ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications