ಧಾರವಾಡ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಯಲು ಸಚಿವರ ಖಡಕ್ ಸೂಚನೆ
ಧಾರವಾಡ, ಏಪ್ರಿಲ್ 7: ಧಾರವಾಡ ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಜನರಿಗೆ ಶುದ್ಧ ಕುಡಿಯುವ ನೀರನ್ನು ಸತತವಾಗಿ ಪೂರೈಕೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಸೂಚನೆ ನೀಡಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ 2025ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು, ಅಕಾಲಿಕ ಮಳೆಯಿಂದ ಆಗುವ ಹಾನಿಯ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಅಧಿಕಾರಿಗಳ ಸಭೆ ನಡೆಸಿ, ಕೆಲವು ಮುಖ್ಯವಾದ ಸೂಚನೆಗಳನ್ನು ನೀಡಿದರು.

ಅಳ್ನಾವರ, ಧಾರವಾಡ, ಹುಬ್ಬಳ್ಳಿ , ಕುಂದಗೋಳ, ಕಲಘಟಗಿ ಸೇರಿದಂತೆ ವಿವಿದ ತಾಲೂಕಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಆಗುವ ಸಂಭವವಿದೆ. ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಯಾವುದೇ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲಾಗಿದ್ದು, ಮುಂದಿನ 30 ವಾರಗಳವರೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 20ರೊಳಗಾಗಿ ಕುಡಿಯುವ ನೀರಿನ ಸಮಸ್ಯೆಗಳಿರುವ ಇತರ ಹಳ್ಳಿಗಳಿಗೆ ತೆರಳಿ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ನಂತರ ಕುಡಿಯುವ ನೀರಿನ ಅಭಾವ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಶಾಸಕರ ಜೊತೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಬೇಕಿದೆ. ಹುಬ್ಬಳ್ಳಿ ನಗರಕ್ಕೆ ನೀರಸಾಗರ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗಳ ಅನುಷ್ಠಾನಕ್ಕೆ ಪಾಲಿಕೆ ಮುಂದಾಗಬೇಕು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡಗಳಲ್ಲಿ ಸುಮಾರು 29 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ನಿರಂತರ ನಿರಂತರ ನೀರು ಸರಬರಾಜು ಮಾಡುವ ವಾರ್ಡ್‌ಗಳಲ್ಲಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ವಾರ್ಡ್ ಗಳಿಗೆ ಒಂದು ಸಮಿತಿ ರಚಿಸಿ, ಮಾಹಿತಿ ಸಂಗ್ರಹಿಸಬೇಕಾಗಿದೆ. ಮುಂದಿನ 3 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ತಹಶೀಲ್ದಾರರು ಹೆಚ್ಚಾಗಿ ತಮ್ಮ ಕಾರ್ಯಸ್ಥಾನಗಳಲ್ಲಿ ಇರಬೇಕು. ಜನರಿಂದ ದೂರುಗಳು ಬಂದ ತಕ್ಷಣ ಸ್ಪಂದಿಸಬೇಕಾಗುತ್ತದೆ. ಕಲಘಟಗಿ ತಾಲೂಕಿನಾದ್ಯಂತ ಕಳೆದ ಮೂರು ತಿಂಗಳಲ್ಲಿ 623 ಟ್ರಾನ್ಸ್ಫಾರ್ಮರ್ ಗಳು ಹಾಳಾಗಿವೆ. ಹೀಗಾಗಿ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಜಾತ್ರೆಗಳು ಇದ್ದಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಹೀಗಾಗಿ ತಾಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಬೇಕು. ಇದರಿಂದ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.












Click it and Unblock the Notifications