Dharawad Rural Election Results: ಕ್ಷೇತ್ರಕ್ಕೆ ಕಾಲಿಡದೇ ಗೆದ್ದು ಬೀಗಿದ ವಿನಯ್ ಕುಲಕರ್ಣಿ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಶನಿವಾರ, ಮೇ 13) ಪ್ರಕಟವಾಗಿದ್ದು, ಹೈ-ವೋಲ್ಟೇಜ್ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಗೆದ್ದು ಬೀಗಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಮೃತ್ ದೇಸಾಯಿ ವಿರುದ್ಧ 17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಧಾರವಾಡ ಕ್ಷೇತ್ರಕ್ಕೆ ಪ್ರವೇಶ ಇಲ್ಲದಿದ್ದರೂ ವಿನಯ್ ಕುಲಕರ್ಣಿ ಅವರು ಕ್ಷೇತ್ರದಿಂದ ಹೊರಗಿದ್ದು, ಹಾಲಿ ಬಿಜೆಪಿ ಶಾಸಕ ಅಮೃತ್ ದೇಸಾಯಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನಿರ್ಬಂಧಿಸಿತ್ತು. ಆದರೂ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಪರ ಪತ್ನಿ ಹಾಗೂ ಮಕ್ಕಳು ನಿರಂತರ ಪ್ರಚಾರ ನಡೆಸಿದ್ದರು. ನಾಮಪತ್ರ ಕೂಡ ಅವರೇ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ದಿನ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ಕಾರ್ಯಕರ್ತರ ಜೊತೆ ಮಾತನಾಡಿದ್ದರು.
ನನ್ನನ್ನು ಧಾರವಾಡ ಜಿಲ್ಲೆಗೆ ಬರಲು ನಿಷೇಧಿಸಿದ್ದರೂ ನೀವು ನನಗಾಗಿ ಇಷ್ಟು ಜನ ಬಂದಿದ್ದೀರಿ. ಈ ರೀತಿಯ ಕುತಂತ್ರ ರಾಜಕಾರಣ ಮಾಡಬಾರದು ಎಂದು ವಿನಯ್ ಕುಲಕರ್ಣಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದರು.
2018ರ ಚುನಾವಣೆ ಫಲಿತಾಂಶ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿಯ ಅಮೃತ್ ದೇಸಾಯಿ ಅವರು ಗೆಲುವು ಸಾಧಿಸಿದ್ದರು.
ಅಮೃತ್ ದೇಸಾಯಿ 85,123 ಮತಗಳನ್ನು ಪಡೆದಿದ್ದರೆ, ವಿನಯ್ ಕುಲಕರ್ಣಿ 64,783 ಮತ ಪಡೆದಿದ್ದರು. ಈ ಮೂಲಕ ಅಮೃತ್ ದೇಸಾಯಿ 20,340 ಮತಗಳ ಅಂತರದಿಂದ ಗೆಲುವು ಕಂಡಿದ್ದರು.












Click it and Unblock the Notifications