ISRO ಗಗನಯಾನಕ್ಕೆ ಹೊರಟ ಧಾರವಾಡದ ನೊಣಗಳು: ಸಂಪೂರ್ಣ ವಿವರ ಇಲ್ಲಿದೆ
ಧಾರವಾಡ, ಆಗಸ್ಟ್ 27: ಮುಂದಿನ ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO) ನಡೆಸಲಿರುವ ಗಗನಯಾನದಲ್ಲಿ ಧಾರವಾಡದ ನೊಣಗಳು ತೆರಳಲಿವೆ. ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸಿದ್ಧಪಡಿಸಿರುವ ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿದೆ.
ದೇಶದ ಎಲ್ಲಾ 75 ಕೃಷಿ ವಿಶ್ವವಿದ್ಯಾನಿಲಯಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿಶ್ವವಿದ್ಯಾನಿಲಯಯ ಜೀವಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಹಣ್ಣಿನ ನೊಣಗಳ ದೇಹ ರಚನೆಗೂ ಮಾನವ ದೇಹ ರಚನೆಗೂ ಹೋಲಿಕೆ ಇದೆ. ಶೂನ್ಯ ಗುರುತ್ವದಲ್ಲಿ ನೊಣಗಳ ದೇಹದಲ್ಲಿ ಆಗುವ ಬದಲಾವಣೆಗಳು ಮಹತ್ವದ ಮಾಹಿತಿ ಒದಗಿಸಲಿವೆ. ಇದು ಭವಿಷ್ಯದ ಮಾನವ ಸಹಿತ ಗಗನಯಾನಕ್ಕೆ ನೆರವಾಗಲಿದೆ.
2025ರಲ್ಲಿ ಭಾರತ ನಭಕ್ಕೆ ಕಳುಹಿಸುವ ಗಗನಯಾನ ನೌಕೆಯಲ್ಲಿ ಈ ಹಣ್ಣಿನ ನೊಣದ ಕಿಟ್ ಕಳುಹಿಸಿಕೊಡಲಾಗುತ್ತಿದೆ. ಎರಡ ರಿಂದ ಏಳು ದಿನಗಳ ಕಾಲ ಇಸ್ರೋ ಹಾರಿ ಬಿಡುವ ಗಗನನೌಕೆ ಶೂನ್ಯ ಗುರುತ್ವದ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಮರಳಿ ಗುಜರಾತ್ ಸಮೀಪದ ಸಮುದ್ರದಲ್ಲಿ ಬಂದಿಳಿಯಲಿದೆ.

ಈ ವೇಳೆ ಶೋಧಿತ ಮಾದರಿ ಕಿಟ್‌ನಲ್ಲಿ ಆಗುವ ಬದಲಾವಣೆಗಳು ಮತ್ತು ಅಧ್ಯಯನ ಯೋಗ್ಯ ವಿಚಾರಗಳ ಮೇಲೆ ವಿಜ್ಞಾನಿಗಳ ತಂಡ ನಿಗಾ ಇರಿಸಲಿದೆ. ಮನುಷ್ಯನ ದೈಹಿಕ ರಚನೆಯ ಶೇ.70ರಷ್ಟು ಅಂಶಗಳನ್ನು ಈ ಹಣ್ಣಿನ ನೊಣಗಳ ದೇಹ ಸಂರಚನೆ ಹೋಲುತ್ತದೆ. ಹೀಗಾಗಿ ಶೂನ್ಯ ಗುರುತ್ವದಲ್ಲಿ ಇವುಗಳ ದೈಹಿಕ ಬದಲಾವಣೆಗಳ ಫಲಿತಗಳು ಬಾಹ್ಯಾಕಾಶ ಸಂಶೋಧನೆಗೆ ಅತ್ಯಂತ ಅಗತ್ಯವಾಗಿದೆ.
ಕೇಂದ್ರ ಸರ್ಕಾರವು ಈ ಯೋಜನೆಗೆ 78 ಲಕ್ಷ ರೂಪಾಯಿಗಳನ್ನು ನೀಡಿದ್ದು, ಸತತ ಎರಡು ವರ್ಷಗಳ ಕಾಲ ಹಣ್ಣಿನ ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮಾದರಿ ಕಿಟ್ ಸಜ್ಜುಗೊಳಿಸಲಾಗಿದೆ. ಕೃಷಿ ಸಂಶೋಧನೆ ಮತ್ತು ಫಲಿತಗಳಲ್ಲಿ ಅತ್ಯಂತ ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಉತ್ಕೃಷ್ಟ 10 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಯ ಜೀವಶಾಸ್ತ್ರ ವಿಭಾಗದ ಯುವ ವಿಜ್ಞಾನಿ ಡಾ.ರವಿ ಕುಮಾರ್ ಹೊಸಮನಿ ಮತ್ತು ತಂಡ ಶೋಧಿಸಿದ ಈ ಮಾದರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications