Gruha Lakshmi Scheme: ಗೃಹಲಕ್ಷ್ಮೀ ಯೋಜನೆ ನೋಂದಣಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಧಾರವಾಡ ಜಿಲ್ಲಾಧಿಕಾರಿ
ಧಾರವಾಡ, ಜುಲೈ, 20: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಮನೆಯ ಯಜಮಾನಿಗೆ ಮಾಸಿಕ 2,000 ನೀಡುವ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ರಾತ್ರಿ ಚಾಲನೆ ದೊರೆತಿದೆ. ಜಿಲ್ಲೆಯ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಅಗತ್ಯವಿರುವ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನೋಡಲ್ ಇಲಾಖೆಯಾಗಿದೆ. ಈ ಯೋಜನೆಯ ನೋಂದಣಿಯು ಆರಂಭವಾಗಿದ್ದು, ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಯಾವುದೇ ಅಂತಿಮ ಮತ್ತು ಸಮಯವನ್ನು ಸರ್ಕಾರವು ನಿಗದಿಗೊಳಿಸಿಲ್ಲ. ಆದ್ದರಿಂದ ನೋಂದಣಿಯಲ್ಲಿ ವಿಳಂಬವಾದರೆ ಅರ್ಹ ಫಲಾನುಭವಿಗಳು ಗೊಂದಲಗಳಿಗೆ ಒಳಗಾಗಬಾರದು.

ತಮಗೆ ಎಸ್‍ಎಂಎಸ್ ಮೂಲಕ ನೀಡಿರುವ ದಿನಾಂಕ ಮತ್ತು ಸಮಯದಂದು ನೋಂದಣಿ ಕೇಂದ್ರಗಳಿಗೆ ಹೋಗಬೇಕು. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ನಿಗದಿತ ನೋಂದಣಿ ಕೇಂದ್ರಗಳಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯವರೆಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ತಿಳಿಸಿರುವಂತೆ ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ ಪಾವತಿದಾರರಾಗಿದ್ದರೆ ಈ ಯೋಜನೆಗೆ ಅವರು ಅರ್ಹರಾಗುವುದಿಲ್ಲ.
ಧಾರವಾಡ ಜಿಲ್ಲೆಯ ಯಜಮಾನಿ ಮಹಿಳೆಯರು
ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ 1,83,107 ಪಡಿತರ ಚೀಟಿದಾರರಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ನೋಂದಣಿಗೆ ಮಹಾನಗರ ವ್ಯಾಪ್ತಿಯಲ್ಲಿ 25 ಕರ್ನಾಟಕ ಒನ್ ಕೇಂದ್ರಗಳಿದ್ದು, ಇವುಗಳೊಂದಿಗೆ ಪ್ರತಿ ಝೋನ್‍ಗೆ ಒಂದರಂತೆ 12 ಹೆಚ್ಚುವರಿ ಗೃಹಲಕ್ಷ್ಮೀ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಧಾರವಾಡ ಜಿಲ್ಲಾ ಗ್ರಾಮೀಣ ಭಾಗ, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಗಳಲ್ಲಿ ಒಟ್ಟು 2,33,475 ಪಡಿತರ ಚೀಟಿದಾರರಿದ್ದು, ಗೃಹಲಕ್ಷ್ಮೀ ನೋಂದಣಿಗೆ 177 ಗ್ರಾಮ ಒನ್ ಕೇಂದ್ರ, 145 ಬಾಪೂಜಿ ಸೇವಾ ಕೇಂದ್ರ, 6 ಕರ್ನಾಟಕ ಒನ್ ಕೇಂದ್ರ ಹಾಗೂ 12 ಯು.ಎಲ್.ಬಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ನೋಂದಣಿ ವಿಧಾನ
ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಯು ನೋಂದಣಿಯನ್ನು 2 ವಿಧಾನದಿಂದ ಮಾಡಿಸಬಹುದಾಗಿದೆ. ಮೊದಲನೆಯದಾಗಿ ಈಗಾಗಲೇ ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‍ಎಂಎಸ್ ಮೂಲಕ ತಿಳಿಸಲಾಗುವುದು. ಗ್ರಾಮಾಂತರ ಪುದೇಶದಲ್ಲಿ ನೀವು ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಗೆಯೇ ನಗರ ಪ್ರದೇಶದಲ್ಲಿ ಅವರ ವಾಸಸ್ಥಳದ ಸಮೀಪವಿರುವ ಕರ್ನಾಟಕ-ಒನ್ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳು ಕೇಂದ್ರವಾಗಿರುತ್ತವೆ. ಮತ್ತು ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ.
ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಯಜಮಾನಿಯ ಬ್ಯಾಂಕ್ ಖಾತೆಯ ಪಾಸ್ ಬುಕ್ ಮಾಹಿತಿ ಬೇಕಾಗುತ್ತದೆ. ಮತ್ತು ಯಜಮಾನಿಯು ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್ ಆಧಾರ್ ನಂಬರ್ ಜೋಡಣೆಯಾಗಿರುವ ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ನೋಂದಣಿಗೆ ನಿಗದಿಪಡಿಸಿದ ದಿನಾಂಕದಂದು ಈ ಎಲ್ಲಾ ಮಾಹಿತಿಗಳೊಂದಿಗೆ ಫಲಾನುಭವಿಗಳು ಗ್ರಾಮ್-ಒನ್, ಬಾಪೂಜಿ ಕೇಂದ್ರ, ಕರ್ನಾಟಕ-ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರವನ್ನು ತಮ್ಮ ಮನೆಗೆ ತಲುಪಿಸಲಾಗುವುದು ಎಂದರು.












Click it and Unblock the Notifications